ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಲಿದ್ದಾರಾ? ಇಂತಹದೊಂದು ಚರ್ಚೆಯನ್ನು ಹುಟ್ಟುಹಾಕಿರುವುದು ಮತ್ಯಾರೂ ಅಲ್ಲ, ಬಿಸಿಸಿಐನ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್.
ಹೌದು, ಎಂಎಸ್‌ಕೆ ಪ್ರಸಾದ್ ಅವರ ಪ್ರಕಾರ, ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಕಿಂಗ್ ಕೊಹ್ಲಿ ಮತ್ತೆ ನಾಯಕರಾಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅವರ ಯುಗಾಂತ್ಯವಾಗುತ್ತಿರುವುದು.
ಅಂದರೆ ಏಕದಿನ ವಿಶ್ವಕಪ್ನೊಂದಿಗೆ 36 ವರ್ಷದ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಇದರಿಂದ ಬಿಸಿಸಿಐ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಆದರೆ ಇಲ್ಲಿ ಬಿಸಿಸಿಐ ಮುಂದಿರುವ ಆಯ್ಕೆ ಕೇವಲ ವಿರಾಟ್ ಕೊಹ್ಲಿ.
ಏಕೆಂದರೆ ರೋಹಿತ್ ಶರ್ಮಾ ನಾಯಕತ್ವವನ್ನು ತ್ಯಜಿಸಿದರೆ, ಟಿ20 ಜೊತೆಗೆ ಏಕದಿನ ತಂಡವನ್ನು ಕೂಡ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಆದರೆ ಇದೇ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ ಆಡಿ ಬರೋಬ್ಬರಿ 4 ವರ್ಷಗಳೇ ಕಳೆದಿವೆ.
ಅಂದರೆ ಇಲ್ಲಿ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ನತ್ತ ಗಮನ ಹರಿಸುತ್ತಿಲ್ಲ. ಅಲ್ಲದೆ ಸೀಮಿತ ಓವರ್ಗಳ ತಂಡಗಳಲ್ಲೇ ಉಳಿದುಕೊಳ್ಳಲು ಬಯಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದರೆ ಬಿಸಿಸಿಐ ಹೊಸ ನಾಯಕನನ್ನು ಹುಡುಕಬೇಕಿದೆ.
ಇಲ್ಲಿ ಬಿಸಿಸಿಐ ಮುಂದಿರುವ ಅತ್ಯುತ್ತಮ ಆಯ್ಕೆ ವಿರಾಟ್ ಕೊಹ್ಲಿ. ಹೀಗಾಗಿ ಕಿಂಗ್ ಕೊಹ್ಲಿಗೆ ನಾಯಕತ್ವ ನೀಡುವ ಸಾಧ್ಯತೆಯಿದೆ. ಇದಾಗ್ಯೂ ಆಯ್ಕೆ ಸಮಿತಿಯ ಮನಸ್ಥಿತಿ ನನಗೆ ತಿಳಿದಿಲ್ಲ. ಹಾಗೆಯೇ ವಿರಾಟ್ ಏನು ಯೋಚಿಸುತ್ತಾರೋ ಗೊತ್ತಿಲ್ಲ. ಆಯ್ಕೆದಾರರು ಅನುಭವಿ ಆಟಗಾರನಿಗೆ ಮತ್ತೆ ನಾಯಕತ್ವ ನೀಡಲು ಬಯಸಿದರೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಬಹುದು ಎಂದು ಎಂಎಸ್‌ಕೆ ಪ್ರಸಾದ್ ತಿಳಿಸಿದ್ದಾರೆ.
2014 ರಿಂದ 2022 ರವರೆಗೆ 68 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮುನ್ನಡೆಸಿದ್ದ ವಿರಾಟ್ ಕೊಹ್ಲಿ 40 ಗೆಲುವು, 11 ಡ್ರಾ ಸಾಧಿಸಿದ್ದರು. ಇನ್ನು ಕಿಂಗ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡ ಸೋತಿರುವುದು ಕೇವಲ 17 ಪಂದ್ಯಗಳಲ್ಲಿ ಮಾತ್ರ.
ಅಂದರೆ ಶೇ. 70.17 ಗೆಲುವಿನ ಸರಾಸರಿ ಹೊಂದಿರುವ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ತಂಡದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಎಂಎಸ್‌ಕೆ ಪ್ರಸಾದ್ ಬಿಸಿಸಿಐ ಮತ್ತೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ ಎಂದಿರುವುದು.
Published On - 10:08 pm, Mon, 10 July 23