
ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 59 ರನ್ ಬಾರಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಅರ್ಧಶತಕದೊಂದಿಗೆ ಕಿಂಗ್ ಕೊಹ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

ಅಂದರೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ 31 ಬಾರಿ 50 ಪ್ಲಸ್ ರನ್ ಕಲೆಹಾಕಿದ್ದಾರೆ. ಇದರಲ್ಲಿ 27 ಅರ್ಧಶತಕಗಳಿದ್ದರೆ, 4 ಭರ್ಜರಿ ಶತಕಗಳಿವೆ.

ಇದೀಗ ಕೇವಲ ಅರ್ಧಶತಕಗಳ ಮೂಲಕವೇ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರ ಈ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 31 ಅರ್ಧಶತಕಗಳನ್ನು ಬಾರಿಸಿದ್ದು, ಈ ಮೂಲಕ 31 ಬಾರಿ 50+ ರನ್ ಕಲೆಹಾಕಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಇನ್ನು ಹಾಂಗ್ ಕಾಂಗ್ ವಿರುದ್ದದ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನೂ ಕೂಡ ಬರೆದಿದ್ದಾರೆ.

ಟಿ20 ಕ್ರಿಕೆಟ್ ಅರ್ಧಶತಕದ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (31) ಅಗ್ರಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ (27) ದ್ವಿತೀಯ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ (26) ಮೂರನೇ ಸ್ಥಾನದಲ್ಲಿದ್ದಾರೆ.

ಒಟ್ಟಿನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೊಂದಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.