ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಇದೀಗ ಮತ್ತೊಂದು ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿ ಎಂಬುದು ವಿಶೇಷ.
ಸೆಪ್ಟೆಂಬರ್ 2 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ 102 ರನ್ ಬಾರಿಸಿದರೆ ಏಕದಿನ ಕ್ರಿಕೆಟ್ನಲ್ಲಿ 13 ಸಾವಿರ ರನ್ ಪೂರೈಸಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 13000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಬಹುದು.
ಸದ್ಯ ಈ ವಿಶ್ವ ದಾಖಲೆ ಇರುವುದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ. ಮಾಸ್ಟರ್ ಬ್ಲಾಸ್ಟರ್ 321 ಏಕದಿನ ಇನಿಂಗ್ಸ್ಗಳ ಮೂಲಕ 13 ಸಾವಿರ ರನ್ ಪೂರೈಸಿದ್ದರು.
ಇದೀಗ ವಿರಾಟ್ ಕೊಹ್ಲಿ 265 ಏಕದಿನ ಇನಿಂಗ್ಸ್ಗಳಿಂದ ಒಟ್ಟು 12898 ರನ್ ಕಲೆಹಾಕಿದ್ದಾರೆ. ಸಚಿನ್ ದಾಖಲೆ ಮುರಿಯಲು ಕಿಂಗ್ ಕೊಹ್ಲಿಗೆ ಬೇಕಿರುವುದು ಕೇವಲ 102 ರನ್ಗಳು ಮಾತ್ರ.
ಅಂದರೆ ಮುಂದಿನ 55 ಏಕದಿನ ಇನಿಂಗ್ಸ್ಗಳ ಮೂಲಕ 102 ರನ್ ಕಲೆಹಾಕಿದರೆ ಈ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಏಕೆಂದರೆ ಸಚಿನ್ 321 ಇನಿಂಗ್ಸ್ ಮೂಲಕ 13 ಸಾವಿರ ರನ್ ಪೂರೈಸಿದ್ದರೆ, ಇತ್ತ ವಿರಾಟ್ ಕೊಹ್ಲಿ 265 ಇನಿಂಗ್ಸ್ ಮೂಲಕವೇ ಈ ಸಾಧನೆ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ಹೀಗಾಗಿ ಮುಂದಿನ 55 ಇನಿಂಗ್ಸ್ಗಳ ಮೂಲಕ ವಿರಾಟ್ ಕೊಹ್ಲಿ 102 ರನ್ ಪೇರಿಸಿದರೆ ಸಚಿನ್ ಹೆಸರಿನಲ್ಲಿರುವ ವಿಶ್ವ ದಾಖಲೆ ಕಿಂಗ್ ಕೊಹ್ಲಿಯ ಪಾಲಾಗಲಿದೆ. ಈ ವಿಶ್ವ ದಾಖಲೆ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕವೇ ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಲಿದೆಯಾ ಕಾದು ನೋಡಬೇಕಿದೆ.
ಬಹುನಿರೀಕ್ಷಿತ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷ.