
ಅಜಿತ್ ಅಗ್ರಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್‌ಗಳಿಗೆ ಭಾರತ ತಂಡವನ್ನು ಅಂತಿಮಗೊಳಿಸಲು ಗುರುವಾರ ಸಭೆ ಸೇರಬೇಕಿತ್ತು. ಸಭೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಇಂದು ಶುಕ್ರವಾರ ಟೀಮ್ ಇಂಡಿಯಾ ಪ್ರಕಟ ಆಗಲಿದೆ ಎಂದು ಕ್ರಿಕ್‌ಬಜ್ ವರದಿಯು ಉಲ್ಲೇಖಿಸಿದೆ.

ಮೂರನೇ, ನಾಲ್ಕನೇ ಮತ್ತು ಐದನೇ ಟೆಸ್ಟ್‌ಗಳಿಗೆ ಭಾರತ ತಂಡವನ್ನು ಪ್ರಕಟಿಸುವಲ್ಲಿ ಬಿಸಿಸಿಐ ಯಾಕಿಷ್ಟು ವಿಳಂಬ ಮಾಡುತ್ತಿದೆ ಎಂದು ಅನೇಕರು ಕೇಳುತ್ತಿದ್ದಾರೆ. ವಿರಾಟ್ ಕೊಹ್ಲಿ ಉತ್ತರಕ್ಕೆ ಬಿಸಿಸಿಐ ಕಾಯುತ್ತಿದೆ ಎನ್ನಲಾಗಿತ್ತು. ಆದರೆ, ಇದು ಸುಳ್ಳು. ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸದಿರಲು ಕೊಹ್ಲಿ ಕಾರಣವಲ್ಲ. ಇದೀಗ ಅಸಲಿ ವಿಚಾರ ಬಹಿರಂಗವಾಗಿದೆ.

ಕೊಹ್ಲಿ ಟೀಮ್ ಇಂಡಿಯಾ ಸೇರುವ ದಿನಾಂಕದ ಬಗ್ಗೆ ಮಂಡಳಿಗೆ ಇನ್ನೂ ತಿಳಿಸಿಲ್ಲ. ಆದರೆ ರಾಜ್‌ಕೋಟ್ ಮತ್ತು ರಾಂಚಿಯಲ್ಲಿ ನಡೆಯಲಿರುವ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗೆ ಮಾಜಿ ನಾಯಕ ಲಭ್ಯವಿರುವುದಿಲ್ಲ ಎಂದು ಹೆಚ್ಚು ಕಡಿಮೆ ದೃಢಪಡಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೊಹ್ಲಿ ಬಗ್ಗೆ ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್‌ಮೆಂಟ್ ತಲೆಕೆಡಿಸಿಕೊಂಡಿಲ್ಲ. ಸದ್ಯ ತಂಡ ಪ್ರಕಟದ ವಿಳಂಬಕ್ಕೆ ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ. ವಿಶೇಷವಾಗಿ ಮೂರನೇ ಟೆಸ್ಟ್‌ಗೆ ಇನ್ನೂ ಒಂದು ವಾರ ಬಾಕಿ ಇರುವ ಕಾರಣ ಆಯ್ಕೆದಾರರು ತಂಡವನ್ನು ಪ್ರಕಟಿಸಲು ಯಾವುದೇ ಆತುರ ಮಾಡುತ್ತಿಲ್ಲ.

ಮೂರನೇ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡುವ ಆಲೋಚನೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮಾಡಿದೆ. ಆದರೆ, ಮತ್ತೊಂತರಡೆ ಮೊದಲ ಎರಡು ಟೆಸ್ಟ್‌ಗಳನ್ನು ಗಮನಿಸಿದಾಗ ಆಯ್ಕೆಗಾರರು ಬುಮ್ರಾ ರಾಜ್‌ಕೋಟ್‌ನಲ್ಲಿ ಆಡಬೇಕೆಂದು ಹೇಳುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಬಂದರೂ ಬುಮ್ರಾ ಅವರ ಕೌಶಲ್ಯ ತಂಡಕ್ಕೆ ನೆರವಾಗಲಿದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಬುಮ್ರಾ ಇದುವರೆಗೆ ಮೊದಲ ಎರಡು ಟೆಸ್ಟ್‌ಗಳಲ್ಲಿ 58 ಓವರ್‌ಗಳನ್ನು ಬೌಲ್ ಮಾಡಿದ್ದು, 15 ವಿಕೆಟ್‌ಗಳನ್ನು ಪಡೆದಿದ್ದಾರೆ. ವೇಗದ ಬೌಲರ್‌ನ ಕೆಲಸದ ಹೊರೆಯ ಕುರಿತು ಬಿಸಿಸಿಐ ವೈದ್ಯಕೀಯ ತಂಡದ ವಿವರವಾದ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನಂತರ ಅವರೊಂದಿಗೆ ಚರ್ಚಿಸಿ ಅಂತಿಮ ಕರೆಯನ್ನು ತೆಗೆದುಕೊಳ್ಳಲಾಗುತ್ತದೆ.

ಇನ್ನು ರಾಹುಲ್ ಮತ್ತು ಜಡೇಜಾ ಅವರ ಫಿಟ್‌ನೆಸ್ ವರದಿಗಾಗಿ ಬಿಸಿಸಿಐ ಕಾಯುತ್ತಿದೆ. ಕ್ವಾಡ್ರೈಸ್ಪ್ ಗಾಯದಿಂದ ರಾಹುಲ್ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು ಮತ್ತು ಜಡೇಜಾ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇಬ್ಬರೂ ಬೆಂಗಳೂರಿನ ಎನ್‌ಸಿಎಯಲ್ಲಿ ಸಂಪೂರ್ಣ ಫಿಟ್‌ನೆಸ್ ಪರೀಕ್ಷೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.