Virat Kohli: ವಿರಾಟ್ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿರುವ 2 ಟ್ರೋಫಿ
Virat Kohli: 2008 ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಿದ್ದ ವಿರಾಟ್ ಕೊಹ್ಲಿ, 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇನ್ನು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾದಲ್ಲೂ ವಿರಾಟ್ ಕೊಹ್ಲಿ ಇದ್ದರು. ಇದೀಗ 2024 ರಲ್ಲಿ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕೊಹ್ಲಿ 4 ಪ್ರಮುಖ ಪ್ರಶಸ್ತಿಗಳನ್ನು ಎತ್ತಿ ಹಿಡಿದಿದ್ದಾರೆ.
1 / 5
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗುವುದರೊಂದಿಗೆ ವಿರಾಟ್ ಕೊಹ್ಲಿ (Virat Kohli) ತಮ್ಮ ಬಹುದೊಡ್ಡ ಕನಸನ್ನು ಈಡೇರಿಸಿಕೊಂಡಿದ್ದಾರೆ. 2012 ರಿಂದ 2022ರವರೆಗೆ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಪಾಲಿಗೆ ಚುಟುಕು ವಿಶ್ವಕಪ್ ಎಂಬುದು ಮರೀಚಿಕೆಯಾಗಿತ್ತು. ಆದರೆ ತಮ್ಮ ಕೊನೆಯ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ವಿರಾಟ್ ಕೊಹ್ಲಿ ಕೊನೆಗೂ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
2 / 5
ಈ ಮೂಲಕ ಭಾರತದ ಪರ ಅಂಡರ್-19 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಟಿ20 ವಿಶ್ವಕಪ್ ಗೆದ್ದಿರುವ ಕೊಹ್ಲಿ ಮತ್ತೆರಡು ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಂದರೆ ಈ ಎರಡು ಟ್ರೋಫಿಗಳೂ ಕೂಡ ವಿರಾಟ್ ಪಾಲಿಗೆ ಮರೀಚಿಕೆಯಾಗಿ ಉಳಿದಿದೆ.
3 / 5
ಅವುಗಳಲ್ಲೊಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ. 2021 ರಲ್ಲಿ ಮತ್ತು 2023 ರಲ್ಲಿ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದ್ದರೂ, ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ನಿವೃತ್ತಿ ಅಂಚಿನಲ್ಲಿರುವ ಕೊಹ್ಲಿಯು ಈ ಒಂದು ಟ್ರೋಫಿಯೊಂದಿಗೆ ಟೆಸ್ಟ್ ಬದುಕಿಗೆ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ. ಅದರಂತೆ 2025 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೂಲಕ ಈ ಕನಸನ್ನು ಈಡೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
4 / 5
ಇನ್ನು ಐಪಿಎಲ್ ಟ್ರೋಫಿ ಎಂಬುದು ಕಿಂಗ್ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. 2008 ರಿಂದ ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ಕೊಹ್ಲಿ ಮೂರು ಬಾರಿ ಫೈನಲ್ ಆಡಿದರೂ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಸದ್ಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಕೊಹ್ಲಿ, ಐಪಿಎಲ್ನಲ್ಲಿ ಐದಾರು ವರ್ಷಗಳ ಕಾಲ ಮುಂದುವರೆಯಬಹುದು. ಹೀಗಾಗಿ ಮುಂಬರುವ ಸೀಸನ್ಗಳ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದರೂ ಅಚ್ಚರಿ ಪಡಬೇಕಿಲ್ಲ.
5 / 5
ವಿರಾಟ್ ವಿದಾಯ: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ 125 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ ಒಟ್ಟು 117 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 3056 ಎಸೆತಗಳನ್ನು ಎದುರಿಸಿ 4188 ರನ್ ಕಲೆಹಾಕಿದ್ದಾರೆ. ಇದರ ನಡುವೆ 38 ಅರ್ಧಶತಕ ಹಾಗೂ 1 ಭರ್ಜರಿ ಶತಕ ಸಿಡಿಸಿದ್ದಾರೆ. ಇದೀಗ ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿರುವ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ.
Published On - 8:41 am, Tue, 2 July 24