ಜೂನ್ 4 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಈ ಬಗ್ಗೆ ಇಬ್ಬರು ಆಟಗಾರರೊಂದಿಗೆ ಚರ್ಚಿಸಲು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೌತ್ ಆಫ್ರಿಕಾಗೆ ತೆರಳಲಿದ್ದಾರೆ.
2022ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭಾರತದ ಪರ ಚುಟುಕು ಕ್ರಿಕೆಟ್ ಆಡಿಲ್ಲ. ಏಕದಿನ ವಿಶ್ವಕಪ್ ಅನ್ನು ಗುರಿಯಾಗಿರಿಸಿ ಈ ಇಬ್ಬರು ಆಟಗಾರರು ಟಿ20 ಕ್ರಿಕೆಟ್ನಿಂದ ಹೊರಗುಳಿದಿದ್ದರು.
ಆದರೆ ಏಕದಿನ ವಿಶ್ವಕಪ್ ಬಳಿಕ ಕೂಡ ಇಬ್ಬರು ಹಿರಿಯ ಆಟಗಾರರನ್ನು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಿಗೆ ಪರಿಗಣಿಸಲಾಗಿರಲಿಲ್ಲ. ಹೀಗಾಗಿ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿಯ ಟಿ20 ಕೆರಿಯರ್ ಖತಂ ಎನ್ನಲಾಗಿತ್ತು.
ಆದರೀಗ ಮುಂಬರುವ ಟಿ20 ವಿಶ್ವಕಪ್ನಲ್ಲೂ ಮತ್ತೊಮ್ಮೆ ಇಬ್ಬರು ದಿಗ್ಗಜರನ್ನು ಜೊತೆಯಾಗಿ ಕಣಕ್ಕಿಳಿಸಲು ಬಿಸಿಸಿಐ ಆಯ್ಕೆ ಸಮಿತಿ ಬಯಸಿದೆ. ಹೀಗಾಗಿ ಇಬ್ಬರು ಆಟಗಾರರೊಂದಿಗೆ ಚರ್ಚಿಸಲು ಅಜಿತ್ ಅಗರ್ಕರ್ ಸೌತ್ ಆಫ್ರಿಕಾಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಇನ್ನಿಬ್ಬರು ಸದಸ್ಯರಾದ ಶಿವಸುಂದರ್ ದಾಸ್ ಮತ್ತು ಸಲೀಲ್ ಅಂಕೋಲಾ ಈಗಾಗಲೇ ಕೇಪ್ ಟೌನ್‌ನಲ್ಲಿದ್ದಾರೆ. ಇದೀಗ ಅಜಿತ್ ಅಗರ್ಕರ್ ಕೂಡ ತೆರಳುತ್ತಿದ್ದು, ಅಲ್ಲೇ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಅದರಂತೆ 2024 ರಲ್ಲಿ ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್ಗೆ ಕಂಬ್ಯಾಕ್ ಮಾಡುವುದು ಬಹುತೇಕ ಖಚಿತ ಎನ್ನಬಹುದು. ಈ ಮೂಲಕ ಇಬ್ಬರು ದಿಗ್ಗಜರು ಜೊತೆಗೂಡಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲಿದ್ದಾರಾ ಕಾದು ನೋಡಬೇಕಿದೆ.