
ಒಂದೆಡೆ ಟೀಮ್ ಇಂಡಿಯಾ ನಾಯಕತ್ವದ ಚರ್ಚೆಗಳು ಜೋರಾಗಿದ್ದರೆ, ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಚರ್ಚೆಗಳಿಗೆ ವಿರಾಮ ಹಾಕಿದ್ದಾರೆ.

ಹೌದು, ದಕ್ಷಿಣ ಆಫ್ರಿಕಾ ಸರಣಿಗಾಗಿ ತೆರಳುವ ಮುನ್ನ ಮುಂಬೈನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಳೆದ ಕೆಲ ದಿನಗಳಿಂದ ಹಬ್ಬಿದ ಎಲ್ಲಾ ವದಂತಿಗಳಿಗೆ ಕೊಹ್ಲಿ ಸ್ಪಷ್ಟನೆ ನೀಡಿದರು.

ಅದರಲ್ಲೂ ಮುಖ್ಯವಾಗಿ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಆಡುವುದಿಲ್ಲ ಎಂಬ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ, ನಾನು ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಬಿಸಿಸಿಐಗೆ ಯಾವುದೇ ರೀತಿಯ ವಿಶ್ರಾಂತಿಗೆ ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಅಲ್ಲದೆ ಮುಂಬರುವ ಏಕದಿನ ಸರಣಿಗೆ ಲಭ್ಯರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಹರಿದಾಡಿದ್ದ ಕೊಹ್ಲಿ ಏಕದಿನ ಸರಣಿ ಆಡುವುದಿಲ್ಲ ಎಂಬ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುವ ಬಗ್ಗೆ ತಿಳಿಸಿದ ವಿರಾಟ್ ಕೊಹ್ಲಿ, ನನ್ನ ಮತ್ತು ರೋಹಿತ್ ನಡುವೆ ಯಾವುದೇ ಸಮಸ್ಯೆ ಇಲ್ಲ. ಯಾವುದೇ ಭಿನ್ನಾಭಿಪ್ರಾಯ ಕೂಡ ಇಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಇಂತಹ ಪ್ರಶ್ನೆಗಳನ್ನು ಈ ರೀತಿಯ ಸುದ್ದಿ ಹಬ್ಬಿಸುವವರಿಗೆ ಕೇಳಬೇಕು ಎಂದು ತಿಳಿಸಿದರು.

ಅಷ್ಟೇ ಅಲ್ಲದೆ ರೋಹಿತ್ ಶರ್ಮಾ ನಾಯಕತ್ವವನ್ನು ಹೊಗಳಿದ ವಿರಾಟ್ ಕೊಹ್ಲಿ, ರೋಹಿತ್ ಅತ್ಯಂತ ಸಮರ್ಥ ನಾಯಕ ಮತ್ತು ತಂತ್ರಗಾರಿಕೆಯಲ್ಲಿ ತುಂಬಾ ಚಾಣಾಕ್ಷ. ಇದೀಗ ತಂಡದ ಕೋಚ್ ಆಗಿ ಗ್ರೇಟ್ ರಾಹುಲ್ ದ್ರಾವಿಡ್ ಕೂಡ ಇದ್ದಾರೆ. ಅಷ್ಟೇ ಅಲ್ಲದೆ ನಾನು ಕೂಡ ಏಕದಿನ ಹಾಗೂ ಟಿ20 ತಂಡಗಳಿಗಾಗಿ ಶೇ. 100 ರಷ್ಟು ಬೆಂಬಲ ನೀಡಲಿದ್ದೇನೆ ಎಂದು ಕೊಹ್ಲಿ ತಿಳಿಸಿದರು.