
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ 9 ಸಾವಿರಕ್ಕಿಂತ ಅಧಿಕ ರನ್ ಕಲೆಹಾಕಿರುವುದು ಕೇವಲ ನಾಲ್ವರು ಮಾತ್ರ. ಈ ನಾಲ್ವರಲ್ಲಿ ವಿರಾಟ್ ಕೊಹ್ಲಿ ಕೊನೆಯವರು. ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 70 ರನ್ ಬಾರಿಸುವ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ್ದಾರೆ.

ಈ ಸಾಧನೆಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದ್ದು ವಿಶೇಷ. ಅಂದರೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ ಅತೀ ನಿಧಾನವಾಗಿ 9000 ರನ್ ಕಲೆಹಾಕಿದ ಬ್ಯಾಟರ್ ಎಂಬ ಹಣೆಪಟ್ಟಿ ಇದೀಗ ಕಿಂಗ್ ಕೊಹ್ಲಿ ಪಾಲಾಗಿದೆ.

ಸಾಮಾನ್ಯವಾಗಿ ಅತೀ ವೇಗವಾಗಿ ರನ್ಗಳ ಮೈಲುಗಲ್ಲು ದಾಟುವ ಕೊಹ್ಲಿ ಈ ಬಾರಿ ಹಿಂದೆ ಉಳಿದಿದ್ದಾರೆ. ಇದಕ್ಕೆ ಸಾಕ್ಷಿ ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿ 196 ಇನಿಂಗ್ಸ್ ಗಳನ್ನು ಆಡಿರುವುದು.

ಅದೇ ರಾಹುಲ್ ದ್ರಾವಿಡ್ 9 ಸಾವಿರ ರನ್ ಕಲೆಹಾಕಲು ತೆಗೆದುಕೊಂಡಿದ್ದು ಕೇವಲ 176 ಇನಿಂಗ್ಸ್ ಗಳನ್ನು ಮಾತ್ರ. ಹಾಗೆಯೇ ಸಚಿನ್ ತೆಂಡೂಲ್ಕರ್ 179 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಸುನಿಲ್ ಗವಾಸ್ಕರ್ 192 ಇನಿಂಗ್ಸ್ ಮೂಲಕ 9 ಸಾವಿರ ರನ್ ಗಳ ಮೈಲುಗಲ್ಲು ದಾಟಿದ್ದರು.

ಆದರೆ ವಿರಾಟ್ ಕೊಹ್ಲಿ 9000 ರನ್ ಗಳನ್ನು ಪೂರೈಸಲು ಬರೋಬ್ಬರಿ 196 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಈ ಮೂಲಕ ಭಾರತದ ಪರ ಅತೀ ಹೆಚ್ಚು ಇನಿಂಗ್ಸ್ ಆಡಿ 9 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಬಾರಿಸಿದ 70 ರನ್ಗಳೊಂದಿಗೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟಿ20+ಏಕದಿನ+ಟೆಸ್ಟ್) ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 15 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹದಿನೈದು ಸಾವಿರ ರನ್ಗಳಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.