- Kannada News Photo gallery Cricket photos IND vs NZ R Ashwin conceded 20 runs in an over for the first time in his Test career
IND vs NZ: ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬೇಡದ ದಾಖಲೆಗೆ ಕೊರಳ್ಳೊಡಿದ ಅಶ್ವಿನ್
R Ashwin: ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 16 ಓವರ್ ಬೌಲ್ ಮಾಡಿದ ಅಶ್ವಿನ್, 5.87 ರ ಎಕಾನಮಿಯಲ್ಲಿ 94 ರನ್‌ಗಳನ್ನು ನೀಡಿ ಕೇವಲ 1 ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ತಾವು ಬೌಲ್ ಮಾಡಿದ ಒಂದು ಓವರ್‌ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟು, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬೇಡದ ದಾಖಲೆಗೆ ಕೊರಳ್ಳೊಡಿದರು.
Updated on: Oct 18, 2024 | 4:11 PM

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 402 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾದ ಬೌಲರ್ಗಳು ಯಶಸ್ವಿಯಾದರು.

ಟೀಂ ಇಂಡಿಯಾ ಪರ ಕುಲ್ದೀಪ್ ಹಾಗೂ ಜಡೇಜಾ ತಲಾ 3 ವಿಕೆಟ್ ಪಡೆದರೆ, ಸಿರಾಜ್ 2, ಬುಮ್ರಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಆದಾಗ್ಯೂ ಅಶ್ವಿನ್ಗೆ ಬೆಂಗಳೂರು ಟೆಸ್ಟ್ ಇದುವರೆಗೆ ವಿಶೇಷವೇನೂ ಆಗಿಲ್ಲ. ಮೊದಲು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದ ಅಶ್ವಿನ್ ಶೂನ್ಯ ಸುತ್ತಿದರೆ, ಆ ನಂತರ ಬೌಲಿಂಗ್ನಲ್ಲೂ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 16 ಓವರ್ ಬೌಲ್ ಮಾಡಿದ ಅಶ್ವಿನ್, 5.87 ರ ಎಕಾನಮಿಯಲ್ಲಿ 94 ರನ್‌ಗಳನ್ನು ನೀಡಿ ಕೇವಲ 1 ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ತಾವು ಬೌಲ್ ಮಾಡಿದ ಒಂದು ಓವರ್‌ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟು, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬೇಡದ ದಾಖಲೆಗೆ ಕೊರಳ್ಳೊಡಿದರು.

ವಾಸ್ತವವಾಗಿ ನ್ಯೂಜಿಲೆಂಡ್ ಇನಿಂಗ್ಸ್‌ನ 80ನೇ ಓವರ್ ಬೌಲ್ ಮಾಡಿದ ಅಶ್ವಿನ್, ಈ ಓವರ್‌ನಲ್ಲಿ ಒಟ್ಟು 20 ರನ್‌ಗಳನ್ನು ನೀಡಿದರು. ಇದರಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ್ದವು. ಆರ್ ಅಶ್ವಿನ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಅವರು ಓವರ್‌ನಲ್ಲಿ 20 ರನ್‌ಗಳನ್ನು ಬಿಟ್ಟುಕೊಟ್ಟ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಈ ಮೊದಲು ಒಂದು ಓವರ್‌ನಲ್ಲಿ 17 ರನ್‌ಗಳಿಗಿಂತ ಹೆಚ್ಚು ರನ್ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ 2016 ರ ನಂತರ ಅವರು ಒಂದು ಓವರ್‌ನಲ್ಲಿ 17 ಅಥವಾ ಹೆಚ್ಚಿನ ರನ್ ನೀಡಿದ್ದು ಇದೇ ಮೊದಲು. ಇದಲ್ಲದೆ, ಆರ್ ಅಶ್ವಿನ್ ಭಾರತದಲ್ಲಿ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 20ನೇ ಬಾರಿಗೆ ಕೇವಲ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
