
ಸುಮಾರು 12 ವರ್ಷಗಳ ನಂತರ ಟೀಂ ಇಂಡಿಯಾ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪಂದ್ಯವನ್ನಾಡುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಆರಂಭವಾಗಿದ್ದು, ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ ನಾಯಕ ಗಿಲ್ 31 ರನ್ ಬಾರಿಸಿ ಔಟಾದರು (PC-BCCI).

ಶುಭ್ಮನ್ ಗಿಲ್ ವಿಕಟ್ ಪತನದ ಬಳಿಕ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಈ ಬೌಂಡರಿ ಜೊತೆಗೆ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದರು(PC-BCCI).

ಇಂಗ್ಲೆಂಡ್‌ನಲ್ಲಿ ಮೂರು ಸ್ವರೂಪಗಳಲ್ಲಿ 56 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ದ್ರಾವಿಡ್ 2,645 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಎಂಟು ಶತಕಗಳು ಸೇರಿದಂತೆ 55 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಇಂಗ್ಲೆಂಡ್ ವಿರುದ್ಧ 74 ಇನ್ನಿಂಗ್ಸ್‌ಗಳನ್ನು ಆಡಿ 40 ಸರಾಸರಿಯಲ್ಲಿ 2,642 ರನ್ ಗಳಿಸಿದ್ದರು(PC-PTI).

ಇದೀಗ ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ವಿರುದ್ಧ 75 ನೇ ಇನ್ನಿಂಗ್ಸ್ ಆಡಿದ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದರು. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 56 ಇನ್ನಿಂಗ್ಸ್‌ಗಳಲ್ಲಿ 2,626 ರನ್ ಗಳಿಸಿದ್ದಾರೆ(PC-BCCI).

ಈ ದಾಖಲೆಯ ಜೊತೆಗೆ ಕೊಹ್ಲಿ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 100 ಏಕದಿನ ಪಂದ್ಯಗಳನ್ನಾಡಿದ ಸಾಧನೆಯನ್ನು ಮಾಡಿದರು. ಇದು ಇಂಗ್ಲೆಂಡ್‌ನಲ್ಲಿ ಕೊಹ್ಲಿಯ 35 ನೇ ಪಂದ್ಯವಾಗಿದೆ. ಆದಾಗ್ಯೂ, 2014 ರಲ್ಲಿ ಇದೇ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದರು(PC-PTI).