
India vs New Zealand: ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದಲ್ಲಿದ್ದ ಪ್ರಮುಖ ಆಲ್ರೌಂಡರ್ ಗಾಯಗೊಂಡು ಇದೀಗ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ಹೀಗಾಗಿ ಬೌಲಿಂಗ್ ವೇಳೆ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾಗ್ಯೂ ಅವರು ಬ್ಯಾಟಿಂಗ್ಗೆ ಆಗಮಿಸಿದ್ದರು. ಇದೀಗ ಸುಂದರ್ ಅವರ ಗಾಯದ ವೈದ್ಯಕೀಯ ವರದಿ ಬಂದಿದೆ.

ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಪೆಕ್ಕೆಲುಬಿನಲ್ಲಿ ಗಂಭೀರ ಗಾಯವಾಗಿರುವುದು ಪತ್ತೆಯಾಗಿದೆ. ಹೀಗಾಗಿ ರಾಜ್ಕೋಟ್ ಮತ್ತು ಇಂದೋರ್ನಲ್ಲಿ ನಡೆಯಲಿರುವ ಉಳಿದೆರಡು ಪಂದ್ಯಗಳಿಂದ ವಾಷಿಂಗ್ಟನ್ ಸುಂದರ್ ಹೊರಗುಳಿಯಲಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಪಾರ್ಶ್ವ ಸ್ನಾಯುಗೆ (ಓಬ್ಲಿಕ್ ಮಸಲ್ ಟಿಯರ್) ಗಾಯವಾಗಿತ್ತು. ಹೀಗಾಗಿ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಧ್ರುವ್ ಜುರೆಲ್ ಆಯ್ಕೆಯಾಗಿದ್ದರು. ಇದೀಗ ವಾಷಿಂಗ್ಟನ್ ಸುಂದರ್ ಹೊರಬಿದ್ದಿರುವ ಕಾರಣ ಮತ್ತೋರ್ವ ಆಲ್ರೌಂಡರ್ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.

ಭಾರತ ಏಕದಿನ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).