
ಆಕ್ಲೆಂಡ್ನ ಈಡೆನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಿದೆ. ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಹಾಗೂ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಪರ ಧವನ್ ಹಾಗೂ ಗಿಲ್ ನಿಧಾನಗತಿಯ ಆರಂಭ ಪಡೆದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ಮೊದಲ ವಿಕೆಟ್ಗೆ 23.1 ಓವರ್ಗಳಲ್ಲಿ 124 ರನ್ ಕಲೆಹಾಕಿತು. ಚೆನ್ನಾಗಿಯೇ ಆಡುತ್ತಿದ್ದ ಗಿಲ್ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಔಟಾದರು.

65 ಎಸೆತಗಳಲ್ಲಿ 1 ಫೋರ್, 3 ಸಿಕ್ಸರ್ನೊಂದಿಗೆ ಗಿಲ್ 50 ರನ್ ಗಳಿಸಿದರು. ಇದರ ಬೆನ್ನಲ್ಲೇ 77 ಎಸೆತಗಳಲ್ಲಿ 13 ಫೋರ್ ಬಾರಿಸಿ 72 ರನ್ ಗಳಿಸಿದ್ದ ಶಿಖರ್ ಧವನ್ ಕೂಡ ಬ್ಯಾಟ್ ಕೆಳಗಿಟ್ಟರು.

ಶಿಖರ್ ಧವನ್ ಬ್ಯಾಟಿಂಗ್ ವೈಖರಿ.

ಬಳಿಕ ಶ್ರೇಯಸ್ ಅಯ್ಯರ್ ಜೊತೆ ಇನ್ನಿಂಗ್ಸ್ ಕಟ್ಟಲು ಹೊರಟ ಪಂತ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 23 ಎಸೆತಗಳಲ್ಲಿ 2 ಫೋರ್ನೊಂದಿಗೆ 15 ರನ್ ಗಳಿಸಿ ಪಂತ್ ಅವರು ಫರ್ಗುಸನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಸೂರ್ಯಕುಮಾರ್ ಯಾದವ್ ಆಟ 4 ರನ್ಗೆ ಅಂತ್ಯವಾಯಿತು.

ಈ ಹಂತದಲ್ಲಿ ತಂಡಕ್ಕೆ ಆಧಾರವಾಗಿದ್ದು ಸಂಜು ಸ್ಯಾಮ್ಸನ್ ಹಾಗೂ ಅಯ್ಯರ್. ಇಬ್ಬರೂ 94 ರನ್ಗಳ ಜೊತೆಯಾಟ ಆಡಿದರು. ಸಂಜು 38 ಎಸೆತಗಳಲ್ಲಿ 36 ರನ್ ಗಳಿಸಿದರು.

ಇತ್ತ ಕೊನೆಯ ಓವರ್ ವರೆಗೂ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ 76 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್ ಸಿಡಿಸಿ 80 ರನ್ ಚಚ್ಚಿದರು. ವಾಷಿಂಗ್ಟನ್ ಸುಂದರ್ ಕೇವಲ 16 ಎಸೆತಗಳಲ್ಲಿ 3 ಫೋರ್, 3 ಸಿಕ್ಸರ್ನೊಂದಿಗೆ ಅಜೇಯ 37 ರನ್ ಗಳಿಸಿದರು.

ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಲೂಕಿ ಫರ್ಗುಸನ್ 10 ಓವರ್ ಬೌಲಿಂಗ್ ಮಾಡಿ 59 ರನ್ ನೀಡಿ 3 ವಿಕೆಟ್ ಕಿತ್ತರು. ಟಿಮ್ ಸೌಥೀ 2 ಹಾಗೂ ಆ್ಯಡಂ ಮಿಲ್ನೆ 1 ವಿಕೆಟ್ ಪಡೆದರು.

ಇಂದಿನ ಪಂದ್ಯದ ಮೂಲಕ ಭಾರತ ಪರ ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರಿಷಭ್ ಪಂತ್ (ಉಪನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
Published On - 10:44 am, Fri, 25 November 22