
T20 World Cup 2024: ಟಿ20 ವಿಶ್ವಕಪ್ಗಾಗಿ ವೆಸ್ಟ್ ಇಂಡೀಸ್ ಬಲಿಷ್ಠ ಬಳಗವನ್ನು ಘೋಷಿಸಿದೆ. ಈ ಹಿಂದೆ ಪ್ರಕಟಿಸಲಾದ 15 ಸದಸ್ಯರ ತಂಡದಿಂ ಓರ್ವ ಆಟಗಾರನನ್ನು ಕೈ ಬಿಡಲಾಗಿದ್ದು, ಅವರ ಬದಲಿಗೆ ವೇಗಿ ಒಬೆಡ್ ಮೆಕಾಯ್ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡದಲ್ಲಿ ಜೇಸನ್ ಹೋಲ್ಡರ್ ಸ್ಥಾನ ಪಡೆದಿದ್ದರು. ಇದರ ನಡುವೆ ಇಂಗ್ಲೆಂಡ್ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಹೋಲ್ಡರ್ ಗಾಯಗೊಂಡಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಲು ವಿಫಲರಾಗಿರುವ ಹೋಲ್ಡರ್ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಇದರ ಬೆನ್ನಲ್ಲೇ 27 ವರ್ಷದ ಒಬೆಡ್ ಮೆಕಾಯ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ವೆಸ್ಟ್ ಇಂಡೀಸ್ ಪರ 34 ಟಿ20 ಪಂದ್ಯಗಳನ್ನಾಡಿರುವ ಮೆಕಾಯ್ ಈವರೆಗೆ 46 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ 8 ಪಂದ್ಯಗಳನ್ನಾಡಿದ್ದು, ಈ ವೇಳೆ 11 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗಾಗಿಯೇ ಮೆಕಾಯ್ ಅವರಿಗೆ ವೆಸ್ಟ್ ಇಂಡೀಸ್ ಬಳಗದಲ್ಲಿ ಅವಕಾಶ ನೀಡಲಾಗಿದೆ. ಇನ್ನು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ವಿಂಡೀಸ್ ಪಡೆ ರೋವ್‌ಮನ್ ಪೊವೆಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಈ ತಂಡದಲ್ಲಿ ನಿಕೋಲಸ್ ಪೂರನ್, ಆ್ಯಂಡ್ರೆ ರಸೆಲ್ನಂತಹ ಬಲಿಷ್ಠ ದಾಂಡಿಗರ ದಂಡೇ ಇದ್ದು, ಹೀಗಾಗಿ ವೆಸ್ಟ್ ಇಂಡೀಸ್ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ವೆಸ್ಟ್ ಇಂಡೀಸ್ ಟಿ20 ತಂಡ: ರೋವ್‌ಮನ್ ಪೊವೆಲ್, ಅಲ್ಝಾರಿ ಜೋಸೆಫ್, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ಗುಡಕೇಶ್ ಮೋಟಿ, ಆ್ಯಂಡ್ರೆ ರಸೆಲ್, ನಿಕೋಲಸ್ ಪೂರನ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೊ ಶೆಫರ್ಡ್.
Published On - 2:53 pm, Tue, 28 May 24