
ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯುವ ಆಟಗಾರರಾದ ಸರ್ಫರಾಝ್ ಖಾನ್, ಆಕಾಶ್ ದೀಪ್ ಯಶಸ್ವಿಯಾಗಿದ್ದಾರೆ. ಹಾಗೆಯೇ ಹೊಸಮುಖವಾಗಿ ವೇಗಿ ಯಶ್ ದಯಾಳ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಈ ಮೂವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇತ್ತ ಮೂವರ ಆಗಮನದೊಂದಿಗೆ ಭಾರತ ತಂಡದಿಂದ ಒಟ್ಟು ಐವರು ಆಟಗಾರರು ಹೊರಬಿದ್ದಿದ್ದಾರೆ.

ಅಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಐವರು ಆಟಗಾರರಿಗೆ ಈ ಬಾರಿ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆ ಆಟಗಾರರು ಯಾರೆಂದರೆ....

ಶ್ರೇಯಸ್ ಅಯ್ಯರ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಗಾಯದ ಕಾರಣ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಹೀಗಾಗಿ ದುಲೀಪ್ ಟ್ರೋಫಿ ಮೂಲಕ ತಮ್ಮ ಫಾರ್ಮ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಅಯ್ಯರ್ ಮುಂದಿತ್ತು. ಇದಾಗ್ಯೂ ಶ್ರೇಯಸ್ ಅಯ್ಯರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಅವರನ್ನು ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ.

ಕೆಎಸ್ ಭರತ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದ ಕೆಎಸ್ ಭರತ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಅವರನ್ನು ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಇದೀಗ ರಿಷಭ್ ಪಂತ್ ರಿಎಂಟ್ರಿಯೊಂದಿಗೆ ಭರತ್ ಭಾರತ ತಂಡದಿಂದ ಹೊರಬಿದ್ದಿದ್ದಾರೆ.

ವಾಷಿಂಗ್ಟನ್ ಸುಂದರ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದ ಕಾರಣ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಲಾಗಿತ್ತು. ಇದೀಗ ಜಡ್ಡು ರಿಟರ್ನ್ನೊಂದಿಗೆ ಸುಂದರ್ ಅವರು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ.

ರಜತ್ ಪಾಟಿದಾರ್: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಯುವ ದಾಂಡಿಗ ರಜತ್ ಪಾಟಿದಾರ್ ಅವಕಾಶ ಪಡೆದಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಆಗಮನದೊಂದಿಗೆ ಪಾಟಿದಾರ್ ಕೂಡ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ.

ಮುಖೇಶ್ ಕುಮಾರ್: ವೇಗದ ಬೌಲರ್ ಮುಖೇಶ್ ಕುಮಾರ್ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಉತ್ತಮ ದಾಳಿ ಸಂಘಟಿಸುವಲ್ಲಿ ಅವರು ವಿಫಲರಾಗಿದ್ದರು. ಹೀಗಾಗಿಯೇ ಈ ಬಾರಿ ಮುಖೇಶ್ ಕುಮಾರ್ ಬದಲಿಗೆ ಯುವ ವೇಗಿ ಆಕಾಶ್ ದೀಪ್ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ನೀಡಲಾಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.