- Kannada News Photo gallery Cricket photos Who are the 4 Indians to be sworn in as ICC chairman or president before Jay Shah? here Is the List News In kannada
ಜಯ್ ಶಾಗೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಆಳಿದ ಭಾರತೀಯರು ಇವರು
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಇದೇ 2024ರ ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು 35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಾಗಾದ್ರೆ, ಈವರೆಗೆ ಭಾರತದ ಯಾರೆಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಎನ್ನುವುದನ್ನು ನೋಡಿ.
Updated on: Aug 27, 2024 | 10:26 PM

ಜಯ್ ಶಾಗೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಈವರೆಗೆ ಭಾರತದ ನಾಲ್ವರು ಆಳಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ ಐದನೇ ಭಾರತೀಯನಾಗಿ ಜಯ್ ಶಾ ಹೊರಹೊಮ್ಮಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಧ್ಯಕ್ಷ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಅಂದರೆ ಅದು ಜಗಮೋಹನ್ ದಾಲ್ಮಿಯಾ. ಹೌದು.. ಕೊಲ್ಕತ್ತಾದ ಪ್ರತಿಷ್ಠಿತ ದಾಲ್ಮಿಯಾ ಕಂಪೆನಿಯ ಮಾಲೀಕರಾಗಿದ್ದರೂ ಸಹ ಮೊದಲಿಂದಲೂ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಬೆಳಸಿಕೊಂಡಿದ್ದ ದಾಲ್ಮಿಯಾ ಅವರು 1997 ರಿಂದ 2000ರ ವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು.

NCP ಮುಖ್ಯಸ್ಥರಾಗಿದ್ದ ಶರದ್ ಪವಾರ್ ಅವರು ಭಾರತೀಯ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ಇವರು ರಾಜಕಾರಣ ಮಾತ್ರವಲ್ಲ ಕ್ರಿಕೆಟ್ನಲ್ಲೂ ಅಡಳಿತ ಮಾಡಿದ್ದಾರೆ. 2010 ರಿಂದ 2012 ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಧ್ಯಕ್ಷರಾಗಿದ್ದರು. ಈ ಮೂಲಕ ಐಸಿಸಿ ಅಧ್ಯಕ್ಷರಾದ ಭಾರತದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೇರ್ಮನ್ ಆಗಿದ್ದವರಲ್ಲಿ ಎನ್ ಶ್ರೀನಿವಾಸನ್ ಸಹ ಒಬ್ಬರು. ಐಸಿಸಿ ಅಧ್ಯಕ್ಷರಾದ ಭಾರತದ ಮೂರನೇ ವ್ಯಕ್ತಿ. ಇವರು 2014 ರಿಂದ- 2015ರ ವರೆಗೆ ಐಸಿಸಿ ಚೇರ್ಮನ್ ಆಗಿದ್ದರು. ಎರಡು ವರ್ಷದ ಅಧಿಕಾರ ಅವಧಿ ಪೂರೈಸುವುದಕ್ಕೂ ಮುನ್ನವೇ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಉದ್ಯಮಿ ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ನಡೆದ ಭ್ರಷ್ಟಾಚಾರ, ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅವರು ಬಿಸಿಸಿಐ ಹುದ್ದೆಯನ್ನು ತೊರೆದಿದ್ದರು.

ಜೂನ್ 2014ರಲ್ಲಿ ಐಸಿಸಿ ಚೇರ್ಮನ್ ಆಗಿ ಆಯ್ಕೆಯಾಗಿದ್ದ ಎನ್ ಶ್ರೀನಿವಾಸನ್ ಅವರು ಎರಡು ವರ್ಷದ ಅಧಿಕಾರ ಅವಧಿ ಪೂರೈಸುವುದಕ್ಕೂ ಮುನ್ನವೇ ಅಧಿಕಾರದಿಂದ ಕೆಳಗಿಳಿದ ಬಳಿಕ ಐಸಿಸಿ ಅಧ್ಯಕ್ಷರಾದವರೇ ಅಂದಿನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್. ಭಾರತೀಯ ಕ್ರಿಕೆಟ್ ಮಂಡಳಿ ( ಬಿಸಿಸಿಐ) ಅಧ್ಯಕ್ಷ ಸ್ಥಾನವನ್ನು ತೊರೆದ ಶಶಾಂಕ್ ಮನೋಹರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಚೇರ್ಮನ್ ಆಗಿ 2016 ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿಂದೆ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಶಶಾಂಕ್ ಮನೋಹರ್ ನಂತರ ತಮ್ಮ ನಿರ್ಧಾರ ಬದಲಾಯಿಸಿ, ಐಸಿಸಿಯಲ್ಲೇ ಮುಂದುವರೆದಿದ್ದರು. ಐಸಿಸಿ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯ ಆಯ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ವರೂಪದಲ್ಲೂ ಬದಲಾವಣೆ ತಂದು ಕ್ರೀಡಾರಂಗದ ಬೆಳವಣಿಗೆಗೆ ದಾರಿ ಮಾಡಿದ್ದರು.

ಇದೀಗ ಮತ್ತೊಮ್ಮೆ ಭಾರತದಿಂದ ಐಸಿಸಿ ಅಧ್ಯಕ್ಷ ಸ್ಥಾನವನ್ನು ಜಯ್ ಶಾ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 1ರಿಂದ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಭಾರತದ 5 ವ್ಯಕ್ತಿ ಎಂಬ ಖ್ಯಾತಿಗೆ ಜಯ್ ಶಾ ಪಾತ್ರರಾಗಿದ್ದಾರೆ.




