ಈ ಕೂಪರ್ ಕೊನೊಲಿ ಯಾರು ಗೊತ್ತಾ?
Cooper Connolly: ಕೂಪರ್ ಕೊನೊಲಿ ಈಗಾಗಲೇ ಆಸ್ಟ್ರೇಲಿಯಾ ಪರ 1 ಟೆಸ್ಟ್, 8 ಏಕದಿನ ಹಾಗೂ 11 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಬಿಗ್ ಬ್ಯಾಷ್ ಲೀಗ್ನಲ್ಲೂ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಇದೀಗ ಆಸೀಸ್ ದಾಂಡಿಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಚೊಚ್ಚಲ ಪಂದ್ಯವಾಡಿದ್ದಾರೆ. ಅದು ಸಹ ಭರ್ಜರಿ 72 ರನ್ ಸಿಡಿಸುವ ಮೂಲಕ ಎಂಬುದು ವಿಶೇಷ.
Updated on: Apr 01, 2026 | 8:23 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಕೂಪರ್ ಕೊನೊಲಿ (Cooper Connolly) ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಅಜೇಯ ಇನಿಂಗ್ಸ್ನೊಂದಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ. ಇದರ ಬೆನ್ನಲ್ಲೇ ಯಾರು ಈ ಕೂಪರ್ ಕೊನೊಲಿ ಎಂಬ ಗೂಗಲ್ ಹುಡುಕಾಟ ಶುರುವಾಗಿದೆ. ಅಷ್ಟಕ್ಕೂ ಯಾರು ಈ ಕೊನೊಲಿ?

ಕೂಪರ್ ಕೊನೊಲಿ ಆಸ್ಟ್ರೇಲಿಯಾದ ಭರವಸೆಯ ಯುವ ಆಲ್ರೌಂಡರ್. ಸ್ಪಿನ್ ಬೌಲಿಂಗ್ ಹಾಗೂ ಅತ್ಯುತ್ತಮ ಬ್ಯಾಟಿಂಗ್ ಮಾಡಬಲ್ಲ 22 ವರ್ಷದ ಯುವ ಆಟಗಾರ ಈಗಾಗಲೇ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಪಾದಾರ್ಪಣೆ ಮಾಡಿದ್ದಾರೆ. ಹೀಗೆ ಆಸ್ಟ್ರೇಲಿಯಾ ಅಂಗಳದಲ್ಲಿ ಮಿಂಚಿದ್ದ ಆಟಗಾರನನ್ನು ರಿಕಿ ಪಾಟಿಂಗ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಕರೆ ತಂದಿದ್ದಾರೆ.

ಈ ಬಾರಿಯ ಐಪಿಎಲ್ನ ಪಂದ್ಯಗಳಿಗೆ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಜೋಶ್ ಇಂಗ್ಲಿಸ್ ಅಲಭ್ಯರಾಗುವ ಸೂಚನೆ ಸಿಗುತ್ತಿದ್ದಂತೆ ಪಾಂಟಿಂಗ್ ಕೊನೊಲಿ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಯುವ ಆಲ್ರೌಂಡರ್ನನ್ನು ಪಂಜಾಬ್ ಕಿಂಗ್ಸ್ 3 ಕೋಟಿ ರೂ.ಗೆ ಖರೀದಿಸಿದೆ.

ಹೀಗೆ ಮೂರು ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ಗೆ ಬಂದಿರುವ ಕೂಪರ್ ಕೊನೊಲಿ ಈ ಹಿಂದೆ 2023ರ ಬಿಗ್ ಬ್ಯಾಷ್ ಲೀಗ್ ಫೈನಲ್ನಲ್ಲೂ ಅಬ್ಬರಿಸಿದ್ದರು. ಪರ್ತ್ ಸ್ಕಾಚರ್ಸ್ ಪರವಾಗಿ ನಿರ್ಣಾಯಕ ಹಂತದಲ್ಲಿ ಬ್ಯಾಟ್ ಬೀಸಿದ್ದ ಕೊನೊಲಿ ಕೇವಲ 11 ಎಸೆತಗಳಲ್ಲಿ 25 ರನ್ ಸಿಡಿಸಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದು ಕೊಟ್ಟಿದ್ದರು.

ಅಷ್ಟೇ ಅಲ್ಲದೆ 2022ರ ಅಂಡರ್-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಕಿರಿಯರ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕಾರಣ 2024 ಮತ್ತು 2025 ರಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರವಾಗಿ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅವಕಾಶ ಲಭಿಸಿತ್ತು.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಕೂಪರ್ ಕೊನೊಲಿ ಅವರನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಶಾನ್ ಮಾರ್ಷ್ಗೆ ಹೋಲಿಸಲಾಗುತ್ತಿದೆ. ಕೊನೊಲಿ ಅವರ ಬ್ಯಾಟಿಂಗ್ ಶೈಲಿಯು ಮಾರ್ಷ್ ಅವರನ್ನು ಹೋಲುತ್ತಿರುವುದರಿಂದ ಅವರನ್ನು ಮುಂದಿನ ಮಾರ್ಷ್ ಎಂದು ವರ್ಣಿಸಲಾಗುತ್ತಿದೆ.

ಇತ್ತ ಕೂಪರ್ ಕೊನೊಲಿ ಅವರ ರೋಲ್ ಮಾಡೆಲ್ ಕೂಡ ಶಾನ್ ಮಾರ್ಷ್ ಎಂಬುದು ವಿಶೇಷ. ಈ ಹಿಂದೆ 2008 ರ ಐಪಿಎಲ್ನಲ್ಲಿ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ ಶಾನ್ ಮಾರ್ಷ್ ಅಜೇಯ 84 ರನ್ ಬಾರಿಸಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಇದೀಗ ಕೂಪರ್ ಕೊನೊಲಿ ಕೂಡ ಚೊಚ್ಚಲ ಪಂದ್ಯದಲ್ಲಿ ಅಜೇಯ 72 ರನ್ ಸಿಡಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ತಂದು ಕೊಟ್ಟಿರುವುದು ವಿಶೇಷ.
