
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಂತ್ಗೆ ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ.

ಇತ್ತ ರಿಷಭ್ ಪಂತ್ ತಂಡದಿಂದ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾಗೆ ಹೊಸ ವಿಕೆಟ್ನ ಎಂಟ್ರಿಯಾಗಿದೆ. ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ 29 ವರ್ಷದ ನಾರಾಯಣ್ ಜಗದೀಸನ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗೂಗಲ್ನಲ್ಲಿ ಯಾರು ಈ ಜಗದೀಸನ್ ಎಂಬ ಹುಡುಕಾಟ ಕೂಡ ಶುರುವಾಗಿದೆ. ಅಷ್ಟಕ್ಕೂ ಈ ಜಗದೀಸನ್ ಯಾರು?

ನಾರಾಯಣ್ ಜಗದೀಸನ್ ಅಲಿಯಾಸ್ ಎನ್ ಜಗದೀಸನ್, ತಮಿಳುನಾಡು ಮೂಲದ ವಿಕೆಟ್ ಕೀಪರ್ ಬ್ಯಾಟರ್. ಈವರೆಗೆ ಒಟ್ಟು 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 10 ಶತಕಗಳು ಮತ್ತು 14 ಅರ್ಧಶತಕಗಳ ನೆರವಿನೊಂದಿಗೆ ಒಟ್ಟು 3373 ರನ್‌ಗಳನ್ನು ಗಳಿಸಿದ್ದಾರೆ. ಇದರ ನಡುವೆ ಒಂದು ತ್ರಿಶತಕವನ್ನೂ ಸಹ ಬಾರಿಸಿದ್ದಾರೆ.

2024 ರಲ್ಲಿ ಚಂಡೀಗಢ್ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ಪರ ಆರಂಭಿಕನಾಗಿ ಕಣಕ್ಕಿಳಿದ ಜಗದೀಸನ್ 403 ಎಸೆತಗಳಲ್ಲಿ 321 ರನ್ ಬಾರಿಸಿದ್ದರು. ಈ ವೇಳೆ ಎನ್ಜೆ ಬ್ಯಾಟ್ನಿಂದ ಮೂಡಿಬಂದ ಫೋರ್ಗಳ ಸಂಖ್ಯೆ ಬರೋಬ್ಬರಿ 23. ಹಾಗೆಯೇ ಇದೇ ಇನಿಂಗ್ಸ್ನಲ್ಲಿ 5 ಸಿಕ್ಸ್ಗಳನ್ನು ಸಹ ಸಿಡಿಸಿದ್ದರು.

ಇನ್ನು ಎನ್ ಜಗದೀಸನ್ ಅವರ ವಿಕೆಟ್ ಕೀಪಿಂಗ್ ಬಗ್ಗೆ ಹೇಳುವುದಾದರೆ, 79 ಪ್ರಥಮ ದರ್ಜೆ ಇನಿಂಗ್ಸ್ಗಳಲ್ಲಿ ಗ್ಲೌಸ್ ತೊಟ್ಟಿರುವ ಅವರು ಒಟ್ಟು 133 ರನ್ ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ 14 ಸ್ಟಂಪ್ಗಳನ್ನು ಸಹ ಮಾಡಿದ್ದಾರೆ. ಅತ್ತ ದೇಶೀಯ ಅಂಗಳದಲ್ಲಿ ಅನುಭವಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿರುವ ಜಗದೀಸನ್ ಅವರಿಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದ್ದು, ಅದರಂತೆ 29ನೇ ವಯಸ್ಸಿನಲ್ಲೇ ಭಾರತದ ಪರ ಪಾದಾರ್ಪಣೆ ಮಾಡುವ ಅವಕಾಶ ದೊರೆಯಲಿದೆಯಾ ಕಾದು ನೋಡಬೇಕಿದೆ.