ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ವಿದಾಯದ ಬೆನ್ನಲ್ಲೇ ಭಾರತ ಟಿ20 ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರವಾಗಿ ಸದ್ಯ ನಾಲ್ವರ ಹೆಸರುಗಳು ಕೇಳಿ ಬರುತ್ತಿದೆ. ಅವರೆಂದರೆ....
ಹಾರ್ದಿಕ್ ಪಾಂಡ್ಯ: ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಂಡ್ಯ ಹೆಸರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಭಾರತ ತಂಡವನ್ನು 16 ಪಂದ್ಯಗಳಲ್ಲಿ ಮುನ್ನಡೆಸಿರುವ ಪಾಂಡ್ಯ 10 ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ಪ್ರಸ್ತುತ ಟಿ20 ತಂಡದ ಉಪನಾಯಕರಾಗಿರುವ ಕಾರಣ ಅವರಿಗೆ ನಾಯಕತ್ವ ನೀಡುವ ಸಾಧ್ಯತೆ ಹೆಚ್ಚಿದೆ.
ಜಸ್ಪ್ರೀತ್ ಬುಮ್ರಾ: ಭಾರತ ತಂಡಕ್ಕೆ ಕೇವಲ ಬ್ಯಾಟರ್ಗಳನ್ನು ಮಾತ್ರ ನಾಯಕರನ್ನಾಗಿ ಮಾಡಲಾಗುತ್ತಿದೆ ಎಂಬ ಅಪವಾದ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದೇ ಕಾರಣದಿಂದಾಗಿ ಈ ಹಿಂದೆ ಟೆಸ್ಟ್ ತಂಡದ ಉಪನಾಯಕರನ್ನಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಟಿ20 ತಂಡಕ್ಕೂ ಬುಮ್ರಾ ಹೆಸರು ಕೇಳಿ ಬರುತ್ತಿದೆ. ಈ ಹಿಂದೆ 2 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಬುಮ್ರಾ ಎರಡೂ ಪಂದ್ಯಗಳಲ್ಲೂ ಗೆಲುವಿನ ರುಚಿ ನೋಡಿದ್ದರು. ಹೀಗಾಗಿ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಬುಮ್ರಾ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ.
ರಿಷಭ್ ಪಂತ್: ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಬಿಂಬಿತವಾಗಿರುವ ರಿಷಭ್ ಪಂತ್ ಕೂಡ ಈ ಹಿಂದೆ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 2 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, 2 ಮ್ಯಾಚ್ಗಳಲ್ಲಿ ಸೋಲನುಭವಿಸಿತ್ತು. ಇನ್ನು ಒಂದು ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು. ಇದೀಗ ಧೋನಿ ಬಳಿಕ ಮತ್ತೆ ವಿಕೆಟ್ ಕೀಪರ್ಗೆ ಕ್ಯಾಪ್ಟನ್ ನೀಡಲು ಮುಂದಾದರೆ ಪಂತ್ಗೆ ನಾಯಕತ್ವ ಒಲಿಯಲಿದೆ.
ಸೂರ್ಯಕುಮಾರ್ ಯಾದವ್: ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು 7 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇತ್ತ ಟಿ20 ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನದೊಂದಿಗೆ ಮಿಂಚುತ್ತಿರುವ ಸೂರ್ಯಕುಮಾರ್ ಯಾದವ್ ಕೂಡ ಭಾರತ ತಂಡದ ನಾಯಕತ್ವದ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಸೂರ್ಯನಿಗೆ ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ಸಿ ಒಲಿದರೂ ಅಚ್ಚರಿಪಡಬೇಕಿಲ್ಲ.