ಟಿ20 ವಿಶ್ವಕಪ್ಗೆ ಇಂಗ್ಲೆಂಡ್ ತಾತ್ಕಾಲಿಕ ತಂಡವನ್ನು ಘೋಷಿಸಿದ್ದೇಕೆ?
T20 World Cup 2026 : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-3 ನಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ಇದೀಗ ತಾತ್ಕಾಲಿಕ ತಂಡವನ್ನು ಘೋಷಿಸಿದೆ.
Updated on: Dec 31, 2025 | 8:37 AM

ಟಿ20 ವಿಶ್ವಕಪ್ಗಾಗಿ ಇಂಗ್ಲೆಂಡ್ 15 ಸದಸ್ಯರುಗಳ ತಂಡವನ್ನು ಪ್ರಕಟಿಸಿದೆ. ಆದರೆ ಈ ಪ್ರಕಟಣೆಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದು ತಾತ್ಕಾಲಿಕ ತಂಡವೆಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಇಸಿಬಿ ತಾತ್ಕಾಲಿಕ ತಂಡದ ಘೋಷಣೆ ಮಾಡಿದ್ದೇಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ತಿಂಗಳು ಮಾತ್ರ. ಈಗಾಗಲೇ ಭಾರತ 15 ಸದಸ್ಯರುಗಳ ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಾತ್ಕಾಲಿಕ 15 ಸದಸ್ಯರುಗಳ ತಂಡವನ್ನು ಘೋಷಿಸಿ ಕಾದು ನೋಡುವ ತಂತ್ರಕ್ಕೆ ಕೈ ಹಾಕಿದೆ.

ಅಂದರೆ ಇಂಗ್ಲೆಂಡ್ ತಂಡವು ಜನವರಿಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯು ಇಂಗ್ಲೆಂಡ್ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ.

ಇತ್ತ ಟಿ20 ವಿಶ್ವಕಪ್ಗೂ ಮುನ್ನ ಶ್ರೀಲಂಕಾದಲ್ಲಿ ಟಿ20 ಸರಣಿ ಆಡಲಿರುವ ಇಂಗ್ಲೆಂಡ್ ಆಟಗಾರರ ಪ್ರದರ್ಶನವನ್ನು ಇಸಿಬಿ ಅವಲೋಕಿಸಲಿದೆ. ಈ ಸರಣಿಯಲ್ಲಿ ಯಾವುದಾದರೂ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲಿದ್ದಾರೆ. ಹೀಗಾಗಿಯೇ ಇಂಗ್ಲೆಂಡ್ ಕ್ರಿಕೆಟ್ ತಾತ್ಕಾಲಿಕ ವಿಶ್ವಕಪ್ ತಂಡವನ್ನು ಘೋಷಿಸಿದ್ದಾರೆ.

ಒಂದು ವೇಳೆ ಇಂಗ್ಲೆಂಡ್ ಟಿ20 ವಿಶ್ವಕಪ್ಗೆ ತಂಡವನ್ನು ಘೋಷಿಸಿದರೆ, ಆ ಬಳಿಕ ತಂಡದಿಂದ ಆಟಗಾರರನ್ನು ಕೈ ಬಿಡಲು ಐಸಿಸಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲೂ ಗಾಯಗೊಂಡಿದ್ದರೆ ಅಥವಾ ಇನ್ನಿತರ ಪ್ರಮುಖ ಕಾರಣಗಳನ್ನು ನೀಡಿ ಮಾತ್ರ ಆಟಗಾರರನ್ನು ಬದಲಿಸಲು ಅವಕಾಶ ಇರಲಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಾತ್ಕಾಲಿಕ ತಂಡದ ಘೋಷಣೆಯೊಂದಿಗೆ ರಣತಂತ್ರ ರೂಪಿಸಲು ಮುಂದಾಗಿದೆ.

ಟಿ20 ವಿಶ್ವಕಪ್ಗೆ ಇಂಗ್ಲೆಂಡ್ ತಾತ್ಕಾಲಿಕ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.
