
ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ವೈಟ್ ಹೆಡ್ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದರು. ಲಂಡನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ದಿನದಾಟದ ವೇಳೆ ಸಿರಾಜ್ ಹೆಡ್ಬ್ಯಾಂಡ್ ನೊಂದಿಗೆ ಕೆಲ ಓವರ್‌ಗಳನ್ನು ಸಹ ಎಸೆದಿದ್ದರು.

ಅತ್ತ ಟೀಮ್ ಇಂಡಿಯಾದ ಯಾವುದೇ ಆಟಗಾರರು ಯಾವುದೇ ಬ್ಯಾಂಡ್ ಧರಿಸದೇ ಇದ್ದರೂ, ಮೊಹಮ್ಮದ್ ಸಿರಾಜ್ ಮಾತ್ರ ವಿಶೇಷ ಹೆಡ್ಬ್ಯಾಂಡ್ ನಲ್ಲಿ ಕಾಣಿಸಿಕೊಂಡಿದ್ದರು. ಟೀಮ್ ಇಂಡಿಯಾ ವೇಗಿ ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡ ಬೆನ್ನಲ್ಲೇ, ಸಿರಾಜ್ ಹೆಡ್ಬ್ಯಾಂಡ್ ಧರಿಸಿದ್ದೇಕೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.

ಈ ಪ್ರಶ್ನೆಗೆ ಉತ್ತರ 'ಗ್ರಹಾಂ ತೋರ್ಪ್'. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಗ್ರಹಾಂ ತೋರ್ಪ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಟೀಮ್ ಇಂಡಿಯಾ ವೇಗಿ ಸಿರಾಜ್ ಹೆಡ್ ಬ್ಯಾಂಡ್ ಧರಿಸಿದ್ದಾರೆ. ಅಲ್ಲದೆ ತೋರ್ಪ್ ಅವರ ಲೋಗೊ ಇರುವ ಈ ವಿಶೇಷ ಹೆಡ್ಬ್ಯಾಡ್ ಧರಿಸಿ ಸಿರಾಜ್ ಬೌಲಿಂಗ್ ಅನ್ನು ಸಹ ಮಾಡಿದರು.

ಅಂದಹಾಗೆ ಆಗಸ್ಟ್ 1 ಗ್ರಹಾಂ ತೋರ್ಪ್ ಅವರ 56ನೇ ಹುಟ್ಟುಹಬ್ಬ. ಇಂಗ್ಲೆಂಡ್ ಪರ 182 ಪಂದ್ಯಗಳನ್ನಾಡಿದ್ದ ತೋರ್ಪ್ ವೈಟ್ ಹೆಡ್ಬ್ಯಾಂಡ್ನೊಂದಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2024, ಆಗಸ್ಟ್ 4 ರಂದು ನಿಧನರಾದ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂಗ್ಲೆಂಡ್ ಆಟಗಾರರು ಆಗಸ್ಟ್ 1 ರಂದು ತೋರ್ಪ್ ಅವರ ಲೊಗೊ ಇರುವ ಹೆಡ್ ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದಾರೆ. ಇದೇ ಬ್ಯಾಂಡ್ ಧರಿಸಿ ಮೊಹಮ್ಮದ್ ಸಿರಾಜ್ ಸಹ ಮಾಜಿ ಆಟಗಾರನಿಗೆ ಗೌರವ ಸಲ್ಲಿಸಿ ಗಮನ ಸೆಳೆದಿದ್ದಾರೆ. ಇದೀಗ ಸಿರಾಜ್ ಅವರ ಹೆಡ್ ಬ್ಯಾಂಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 224 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 247 ರನ್ ಗಳಿಸಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದೆ.