
ಮಹಿಳೆಯರ ಉದಯೋನ್ಮುಖ ಏಷ್ಯಾಕಪ್ನಲ್ಲಿ ಇದುವರೆಗೆ ಮಳೆಯ ಆಟವೇ ಹೆಚ್ಚು ನಡೆದಿದೆ. ಗುಂಪು ಹಂತದ ಬಹುತೇಕ ಪಂದ್ಯಗಳು ಮಳೆಯಿಂದ ರದ್ದಾದವು. ಹೀಗಾಗಿ ಭಾರತ ಮಹಿಳಾ ಕ್ರಿಕೆಟ್ ತಂಡ ಕೇವಲ ಒಂದು ಪಂದ್ಯವನ್ನು ಆಡಿ ಸೆಮಿಫೈನಲ್ ಪ್ರವೇಶಿಸಿತ್ತು.

ಸೋಮವಾರ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಒಂದೇ ಒಂದು ಪಂದ್ಯ ನಡೆಯಲಿಲ್ಲ. ಮೀಸಲು ದಿನವಾದ ಮಂಗಳವಾರ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಬೇಕಿತ್ತು. ಆ ಪಂದ್ಯವೂ ಮಳೆಯಿಂದ ರದ್ದಾಯಿತು. ಹೀಗಾಗಿ ಗುಂಪಿನಲ್ಲಿ ಅತ್ಯುತಮ ರನ್ ರೇಟ್ ಹೊಂದಿದ್ದ ಭಾರತ ಸೀದಾ ಫೈನಲ್‌ಗೆ ಎಂಟ್ರಿಕೊಟಿತು.

ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದವು. ಮಳೆ ಪೀಡಿತ ಈ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸಿದ ಬಾಂಗ್ಲಾದೇಶ ಇದೀಗ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಬಾಂಗ್ಲಾ ಎದುರು 6 ರನ್ಗಳಿಂದ ಸೋತ ಪಾಕ್ ಟೂರ್ನಿಯಿಂದ ಹೊರಬಿತ್ತು.

ಮಳೆಯಿಂದಾಗಿ ಈ ಪಂದ್ಯವನ್ನು 9 ಓವರ್‌ಗಳಿಗೆ ಇಳಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 9 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿತು. ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟರ್ಗಳು ಸಿಂಗಲ್ ಡಿಜಿಟ್ಗೆ ಸುಸ್ತಾದರು. ಅಂತಿಮವಾಗಿ 16 ಎಸೆತಗಳಲ್ಲಿ 21 ರನ್ ಬಾರಿಸಿದ ನಹಿದಾ ಅಖ್ತರ್ ಅವರ ಇನ್ನಿಂಗ್ಸ್ ನೆರವಿನಿಂದ ಬಾಂಗ್ಲಾದೇಶ ಪಾಕಿಸ್ತಾನಕ್ಕೆ 60 ರನ್ ಟಾರ್ಗೆಟ್ ನೀಡಿತು.

ಪಾಕ್ ಪರ ನಾಯಕಿ ಫಾತಿಮಾ ಸನಾ 2 ಓವರ್‌ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೇ ಅನುಷಾ ನಾಸಿರ್ 2 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ 2 ವಿಕೆಟ್ ಪಡೆದರು.

60 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಆದರೆ, ವೇಗವಾಗಿ ರನ್ ಕಲೆಹಾಕುವಲ್ಲಿ ಆಟಗಾರ್ತಿಯರು ಎಡವಿದರು. ಹೀಗಾಗಿ ಪಾಕಿಸ್ತಾನ ನಿಗದಿತ 9 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 53 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಬಾಂಗ್ಲಾದೇಶಕ್ಕೆ 6 ರನ್‌ಗಳ ರೋಚಕ ಜಯ ಲಭಿಸಿತು.

ಇಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಈ ಪಂದ್ಯ ಬುಧವಾರ 11 ಗಂಟೆಗೆ ಆರಂಭವಾಗಲಿದೆ.
Published On - 8:13 am, Wed, 21 June 23