ಮೊದಲ ಆಶಸ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಆರಂಭಿಕರಾಗಿ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಆಸೀಸ್ ಪರ ಆರಂಭಿಕರಾಗಿ ಕಣಕ್ಕಿಳಿಯುವ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಕಲೆಹಾಕಿದ ವಿಷಯದಲ್ಲಿ ಟೀಂ ಇಂಡಿಯಾದ ಆಕ್ರಮಣಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದು, ಈ ಹಿಂದೆ ಸೆಹ್ವಾಗ್ ಪಡೆದುಕೊಂಡಿದ್ದ ಐದನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೆಸ್ಟ್‌ನಲ್ಲಿ ಆರಂಭಿಕರಾಗಿ ಹೆಚ್ಚು ರನ್ ಬಾರಿಸಿದವರ ವಿಷಯದಲ್ಲಿ, ಡೇವಿಡ್ ವಾರ್ನರ್ ಇಂಗ್ಲೆಂಡ್‌ನ ಅಲೆಸ್ಟರ್ ಕುಕ್, ಭಾರತದ ಸುನಿಲ್ ಗವಾಸ್ಕರ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೊದಲ ಆಶಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಾರ್ನರ್ ಕೇವಲ ಒಂಬತ್ತು ರನ್‌ಗಳಿಗೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 57 ಎಸೆತಗಳಲ್ಲಿ 36 ರನ್ ಗಳಿಸಿದರು. ಇದರೊಂದಿಗೆ ಅವರು ಟೆಸ್ಟ್‌ನಲ್ಲಿ 8208 ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಟೆಸ್ಟ್‌ನಲ್ಲಿ ಆರಂಭಿಕರಾಗಿ 8207 ರನ್ ಗಳಿಸಿದ ಸೆಹ್ವಾಗ್ ಅವರನ್ನು ಆರನೇ ಸ್ಥಾನಕ್ಕೆ ತಳ್ಳುವಲ್ಲಿ ವಾರ್ನರ್ ಯಶಸ್ವಿಯಾಗಿದ್ದಾರೆ.
ಇದಲ್ಲದೆ ಡೇವಿಡ್ ವಾರ್ನರ್ ಆರಂಭಿಕರಾಗಿ 16,000 ಅಂತಾರಾಷ್ಟ್ರೀಯ ರನ್ ಗಳಿಸಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಾರ್ನರ್ 337 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 42.94 ಸರಾಸರಿಯಲ್ಲಿ 16,920 ರನ್ ಗಳಿಸಿದ್ದಾರೆ. ಇದರಲ್ಲಿ 45 ಶತಕಗಳು ಮತ್ತು 84 ಅರ್ಧಶತಕಗಳು ಸೇರಿವೆ.
ಇನ್ನು ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಅಲೆಸ್ಟರ್ ಕುಕ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕುಕ್ ಆರಂಭಿಕರಾಗಿ ಇದುವರೆಗೆ 11,845 ರನ್ ಬಾರಿಸಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ 9,607 ರನ್ ಸಿಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 9030 ರನ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ 8,625 ರನ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
Published On - 10:20 am, Wed, 21 June 23