ಹಾಂಗ್ ಕಾಂಗ್ನಲ್ಲಿ ನಡೆದ ಮಹಿಳೆಯರ ಉದಯೋನ್ಮುಖ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 31 ರನ್ಗಳಿಂದ ಮಣಿಸಿದ ಭಾರತ ತಂಡ ಚೊಚ್ಚಲ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಅತ್ಯುತ್ತಮ ರನ್ ರೇಟ್ ಹೊಂದಿದ್ದ ಭಾರತ ಸೀದಾ ಫೈನಲ್ಗೆ ಎಂಟ್ರಿಕೊಟ್ಟಿತ್ತು. ಇತ್ತ ಸೆಮಿಫೈನಲ್ನಲ್ಲಿ ಪಾಕ್ ತಂಡವನ್ನು ಮಣಿಸಿದ್ದ ಬಾಂಗ್ಲಾ ಫೈನಲ್ಗೆ ಟಿಕೆಟ್ ಖಚಿತಪಡಿಸಿಕೊಂಡಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 127 ರನ್ ಕಲೆ ಹಾಕಿತು. ತಂಡದ ಪರ ದಿನೇಶ್ ವೃಂದಾ 29 ಎಸೆತಗಳಲ್ಲಿ 36 ರನ್ ಸಿಡಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಕನಿಕಾ ಅಹುಜಾ 23 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕನ್ನಡತಿ ಶ್ರೇಯಾಂಕ ಪಾಟೀಲ್, ಮನ್ನತ್ ಕಶ್ಯಪ್ ಹಾಗೂ ಕನಿಕಾ ಅಹುಜಾ ಅವರ ದಾಳಿಗೆ ನಲುಗಿ ಕೇವಲ 96 ರನ್ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ತಂಡದ ಪರ 17 ರನ್ ಬಾರಿಸಿದ ನಹಿದಾ ಅಖ್ತರ್ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸೋಭಾನ ಮೊಸ್ತರಿ 16 ರನ್ ಸಿಡಿಸಿದರು.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ 4 ಓವರ್ಗಳ ಖೋಟಾದಲ್ಲಿ ಕೇವಲ 13 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದರು. ಈ ಹಿಂದೆ ಶ್ರೇಯಾಂಕ ಈ ಟೂರ್ನಿಯ ಲೀಗ್ ಹಂತದಲ್ಲಿ ಭಾರತ, ಹಾಂಗ್ ಕಾಂಗ್ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಕೇವಲ 2 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು.
ಶ್ರೇಯಾಂಕ ಪಾಟೀಲ್ ಜೊತೆಗೆ ಮನ್ನತ್ ಕಶ್ಯಪ್ ಕೂಡ ಶ್ರೇಷ್ಠ ಪ್ರದರ್ಶನ ನೀಡಿದರು. ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಕಶ್ಯಪ್, 20 ರನ್ ನೀಡಿ 3 ವಿಕೆಟ್ ಪಡೆದರು.
ಹಾಗೆಯೇ ಮಹಿಳಾ ಪ್ರಿಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವ ಕನಿಕಾ ಅಹುಜಾ ಕೂಡ 4 ಓವರ್ ಬೌಲ್ ಮಾಡಿ ಇದರಲ್ಲಿ 23 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಇನ್ನೊಂದು ವಿಚಿತ್ರ ಸಂಗತಿಯೆಂದರೆ ಭಾರತ ಈ ಲೀಗ್ನಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಒಂದು ಹಾಂಗ್ ಕಾಂಗ್ ವಿರುದ್ಧದ ಆರಂಭಿಕ ಪಂದ್ಯವನ್ನಾಡಿದ್ದ ಭಾರತ ಇದೀಗ ಫೈನಲ್ನಲ್ಲಿ ಬಾಂಗ್ಲಾ ತಂಡವನ್ನು ಎದುರಿಸಿತು. ಇನ್ನುಳಿದಂತೆ ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಸೇರಿದಂತೆ ಭಾರತದ ಇತರ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು.
Published On - 12:48 pm, Wed, 21 June 23