
ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಆರಂಭವಾಗುತ್ತಿದ್ದು, ಆತಿಥೇಯ ಭಾರತ ಅಕ್ಟೋಬರ್ 8 ರಂದು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಈ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ನಾಯಕ ರೋಹಿತ್‌ಗೆ ನಾಯಕನಾಗಿ ಇದು ಚೊಚ್ಚಲ ವಿಶ್ವಕಪ್ ಆಗಿದ್ದು, ಈ ವಿಶ್ವಕಪ್‌ನಲ್ಲಿ ರೋಹಿತ್ ಹಲವು ದಾಖಲೆಗಳನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಸದ್ಯ ತಲಾ 6 ಶತಕ ಸಿಡಿಸುವ ಮೂಲಕ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರೋಹಿತ್ ಇನ್ನೊಂದು ಶತಕ ಬಾರಿಸಿದರೆ. ಈ ದಾಖಲೆ ಅವರ ಪಾಲಾಗಲಿದೆ.

ರೋಹಿತ್ ಶರ್ಮಾ (ಇದುವರೆಗೆ 17 ವಿಶ್ವಕಪ್ ಪಂದ್ಯಗಳಲ್ಲಿ 978 ರನ್) ಏಕದಿನ ವಿಶ್ವಕಪ್‌ನಲ್ಲಿ 1,000 ರನ್ ಗಡಿ ದಾಟಿದ ನಾಲ್ಕನೇ ಭಾರತೀಯನಾಗಲು ಇನ್ನೂ 22 ರನ್ ಬಾರಿಸಬೇಕಾಗಿದೆ.

ರೋಹಿತ್ ಶರ್ಮಾ (451 ಪಂದ್ಯಗಳಲ್ಲಿ 551 ಸಿಕ್ಸರ್) ಕ್ರಿಸ್ ಗೇಲ್ ಅವರ (553 ಸಿಕ್ಸರ್) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ಕೇವಲ ಮೂರು ಸಿಕ್ಸರ್‌ಗಳ ದೂರದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18,000 ರನ್ ಪೂರೈಸಿದ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್ ಶರ್ಮಾ (451 ಪಂದ್ಯಗಳಲ್ಲಿ 17,642 ರನ್) ಅವರಿಗೆ ಕೇವಲ 352 ರನ್ ಅಗತ್ಯವಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಬಾರಿಸಿದ ಆರನೇ ಭಾರತೀಯ ಎಂಬ ದಾಖಲೆ ಸೃಷ್ಟಿಸಲು ರೋಹಿತ್‌ಗೆ ಕೇವಲ ಮೂರು ಅರ್ಧಶತಕಗಳ ಅಗತ್ಯವಿದೆ.

ರೋಹಿತ್ ಇದುವರೆಗೆ ಏಕದಿನದಲ್ಲಿ 52 ಅರ್ಧಶತಕಗಳು, ಟೆಸ್ಟ್‌ನಲ್ಲಿ 16 ಅರ್ಧಶತಕಗಳು ಮತ್ತು ಟಿ20 ಮಾದರಿಯಲ್ಲಿ 29 ಅರ್ಧಶತಕಗಳನ್ನು ಬಾರಿಸಿದ್ದಾರೆ.