
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸನಿಹಕ್ಕೆ ಶ್ರೀಲಂಕಾ ತಂಡ ಬಂದಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ದಸುನ್ ಶನಕ ತಂಡ ಅರ್ಹತೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ಶಾಕ್ ನೀಡಿದ್ದ ನೆದರ್ಲೆಂಡ್ಸ್ ವಿರುದ್ಧ ಸ್ವಲ್ಪದರಲ್ಲೇ ಸೋಲಿನಿಂದ ಪಾರಾದ ಲಂಕಾ ಪಂದ್ಯವನ್ನು 21 ರನ್ ಗಳಿಂದ ಗೆದ್ದುಕೊಂಡಿದೆ.

ಬುಲವಾಯೊದಲ್ಲಿ ನಡೆದ ಅರ್ಹತಾ ಸುತ್ತಿನ ಸೂಪರ್-ಸಿಕ್ಸ್ ಸುತ್ತಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಲ್ಲಿಲ್ಲ. ಕೆಲ ದಿನಗಳ ಹಿಂದೆ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ಶಾಕ್ ನೀಡಿದ್ದ ನೆದರ್ಲೆಂಡ್ ಈ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಅದೇ ರೀತಿ ಮಾಡಲು ತಯಾರಿ ನಡೆಸಿತ್ತು. ನೆದರ್ಲೆಂಡ್ಸ್ ಬೌಲರ್‌ಗಳು ಆರಂಭದಲ್ಲೇ ಶ್ರೀಲಂಕಾಕ್ಕೆ ಭರ್ಜರಿ ಹೊಡೆತ ನೀಡಿ, ಕೇವಲ 96 ರನ್‌ಗಳಿಗೆ 6 ವಿಕೆಟ್‌ಗಳನ್ನು ಉರುಳಿಸಿದರು.

ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಧನಂಜಯ ಡಿಸಿಲ್ವಾ ಇಲ್ಲಿಂದ ಲಂಕಾ ಇನಿಂಗ್ಸ್ ನಿಭಾಯಿಸಿದರು.ಇವರೊಂದಿಗೆ ಕೆಳ ಕ್ರಮಾಂಕದಲ್ಲಿ ವನಿಂದು ಹಸರಂಗ ಮತ್ತು ಮಹಿಷ್ ತೀಕ್ಷಣ ಉತ್ತಮ ಬ್ಯಾಟಿಂಗ್ ಮಾಡಿದರು. ಈ ವೇಳೆ ಡಿಸಿಲ್ವಾ ತೀಕ್ಷಣ ಜೊತೆ 77 ರನ್ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಧನಂಜಯ ಶತಕ ಗಳಿಸಲು ಸಾಧ್ಯವಾಗದೆ 93 ರನ್ ಗಳಿಸಿ ಔಟಾದರು. ಹೀಗಾಗಿ ಲಂಕಾ ತಂಡ 213 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ನೆದರ್ಲೆಂಡ್ಸ್ ಪರ ಬಾಸ್ ಡೆಲಿಡಾ 3 ವಿಕೆಟ್ ಪಡೆದರು.

ಲಂಕಾ ನೀಡಿದ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಆರಂಭವೂ ಕೆಟ್ಟದಾಗಿದ್ದು, ತಂಡ 11 ರನ್‌ಗಳಿಗೆ ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡಿತ್ತು. ವಿಕ್ರಮಜಿತ್ ಸಿಂಗ್ ಮತ್ತು ಮ್ಯಾಕ್ಸ್ ಓಡೌಡ್ ಅವರ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಇಲ್ಲಿಂದ ವೆಸ್ಲಿ ಬರಾಸ್ಸಿ ಮತ್ತು ಡೆಲಿಡಾ 77 ರನ್ಗಳ ಜೊತೆಯಾಟ ನಡೆಸಿದರು. ಅವಶ್ಯಕ ಅರ್ಧಶತಕ ಸಿಡಿಸಿ ಗೆಲುವಿನ ಇನ್ನಿಂಗ್ಸ್ ಆಡುತ್ತಿದ್ದ ಬರೈಸಿ ರನೌಟ್ಗೆ ಬಲಿಯಾದರು. ಹೀಗಾಗಿ ಕೇವಲ 133 ರನ್‌ಗಳಿಗೆ ನೆದರ್ಲೆಂಡ್ಸ್ ತಂಡದ 7 ವಿಕೆಟ್‌ಗಳು ಪತನಗೊಂಡಿದ್ದವು.

ಇಲ್ಲಿಂದ ಸಂಪೂರ್ಣ ಜವಾಬ್ದಾರಿ ನಾಯಕ ಸ್ಕಾಟ್ ಎಡ್ವರ್ಡ್ಸ್ (ಔಟಾಗದೆ 67) ಮೇಲೆ ಬಿದ್ದಿತು. ಅವರು ಏಕಾಂಗಿಯಾಗಿ ತಂಡವನ್ನು ಗುರಿಯ ಹತ್ತಿರಕ್ಕೆ ತರಲು ಪ್ರಯತ್ನಿಸಿದರು. ಆದರೆ ಇನ್ನೊಂದು ಬದಿಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಅಂತಿಮವಾಗಿ 40ನೇ ಓವರ್‌ನಲ್ಲಿ ಆರ್ಯನ್ ದತ್ ರೂಪದಲ್ಲಿ ತಂಡದ ಕೊನೆಯ ವಿಕೆಟ್ 192 ರನ್‌ಗಳಿಗೆ ಪತನವಾಯಿತು. ಶ್ರೀಲಂಕಾ ಪರ ಮಹಿಷ್ ತೀಕ್ಷಣ 3 ವಿಕೆಟ್ ಪಡೆದರು.

ಶ್ರೀಲಂಕಾ ಈಗ ಜಿಂಬಾಬ್ವೆಯಂತೆಯೇ 6 ಅಂಕಗಳನ್ನು ಹೊಂದಿದ್ದು, ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಲುಪಿದೆ. ಶ್ರೀಲಂಕಾ ಸೂಪರ್ ಸಿಕ್ಸ್ನಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಬೇಕಿದೆ. ಈ ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯವನ್ನು ಗೆದ್ದರೆ ವಿಶ್ವಕಪ್‌ನಲ್ಲಿ ಲಂಕಾ ಸ್ಥಾನ ಖಚಿತವಾಗಲಿದೆ.