ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲೂ ಬದಲಾವಣೆ ತಂದಿದೆ. ಲಾರ್ಡ್ಸ್‌ನಲ್ಲಿ ನಡೆದ ಈ ಐತಿಹಾಸಿಕ ಪಂದ್ಯವನ್ನು ಇಂಗ್ಲೆಂಡ್ ಇನಿಂಗ್ಸ್ ಮತ್ತು 114 ರನ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಇಂಗ್ಲೆಂಡ್ ಲಾಭಗಳಿಸಿದ್ದು, ವೆಸ್ಟ್ ಇಂಡೀಸ್ ನಷ್ಟ ಅನುಭವಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಟೇಬಲ್ನಲ್ಲಿ ಪ್ರಸ್ತುತ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. 68.51 ರಷ್ಟು ಗೆಲುವಿನ ಶೇಕಡಾವಾರು ಹೊಂದಿರುವ ಟೀಂ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ.
ಭಾರತದ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಆಸೀಸ್ ಪಡೆಯ ಗೆಲುವಿನ ಶೇಕಡಾವಾರು ಪ್ರಸ್ತುತ 62.50 ಆಗಿದೆ. ಅಂದರೆ ಮೊದಲ ಮತ್ತು ಎರಡನೇ ತಂಡದ ನಡುವಿನ ಅಂತರ ಹೆಚ್ಚಿಲ್ಲ.
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ತಂಡದ ಗೆಲುವಿನ ಶೇಕಡಾವಾರು ಪ್ರಸ್ತುತ 50 ಆಗಿದೆ. ಶ್ರೀಲಂಕಾ ಕೂಡ 50 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಆದರೆ ನ್ಯೂಜಿಲೆಂಡ್ 90 ಅಂಕ ಹಾಗೂ ಶ್ರೀಲಂಕಾ 24 ಅಂಕ ಹೊಂದಿರುವುದರಿಂದ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಮುಂದಿದೆ.
ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದೆ. ಈ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ಗೆಲುವಿನ ಶೇಕಡಾವಾರು 33.33 ಆಗಿದ್ದು, ಈಗ 26.66ಕ್ಕೆ ಇಳಿದಿದೆ. ಆದಾಗ್ಯೂ ವಿಂಡೀಸ್ ತಂಡವು ಆರನೇ ಸ್ಥಾನದಲ್ಲಿ ಮುಂದುವರೆದಿದೆ.
ಮೊದಲ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ನಿಂದ ಸೋಲಿಸಿದ ಇಂಗ್ಲೆಂಡ್ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೂ ಗೆಲುವಿನ ಶೇಕಡಾವಾರು ಏರಿಕೆಯಾಗಿದೆ. ಈ ಹಿಂದೆ ತಂಡದ ಗೆಲುವಿನ ಶೇಕಡಾವಾರು 17.50 ಇದ್ದು, ಈಗ 25ಕ್ಕೆ ಏರಿಕೆಯಾಗಿದೆ.
ಆದರೆ ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾದರೆ ಅದರ ಶ್ರೇಯಾಂಕವು ಹೆಚ್ಚಾಗುತ್ತದೆ. ಇದರರ್ಥ ಇಂಗ್ಲೆಂಡ್ ನೇರವಾಗಿ ಐದನೇ ಅಥವಾ ಆರನೇ ಸ್ಥಾನಕ್ಕೇರುವ ಅವಕಾಶ ಪಡೆದಿದೆ.