
ಡಬ್ಲ್ಯುಪಿಎಲ್ನ ಎರಡನೇ ಆವೃತ್ತಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಆರ್ಸಿಬಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿದೆ. ಲೀಗ್ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಆರ್ಸಿಬಿ ತನ್ನ ಸಾಂಘೀಕ ಹೋರಾಟದಿಂದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಇಡೀ ಟೂರ್ನಿಯಲ್ಲಿ ಆರ್ಸಿಬಿ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

ಲೀಗ್ನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಿದ್ದ ಆರ್ಸಿಬಿ 2 ರನ್ಗಳಿಂದ ಗೆಲುವು ಸಾಧಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 157 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಯುಪಿ 155 ರನ್ ಕಲೆಹಾಕಿ 2 ರನ್ಗಳಿಂದ ಸೋಲೊಪ್ಪಿಕೊಂಡಿತ್ತು.

ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಆರ್ಸಿಬಿ ಲೀಗ್ನಲ್ಲಿ ಸತತ 2ನೇ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ 107 ರನ್ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಆರ್ಸಿಬಿ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತ್ತು.

ಮೂರನೇ ಪಂದ್ಯದಲ್ಲಿ ಆರ್ಸಿಬಿಗೆ ಮೊದಲ ಸೋಲು ಎದುರಾಯಿತು. ಬಲಿಷ್ಠ ಡೆಲ್ಲಿ ತಂಡದ ಎದುರು ಆರ್ಸಿಬಿ 25 ರನ್ಗಳಿಂದ ಸೋತಿತ್ತು. ಡೆಲ್ಲಿ ನೀಡಿದ 194 ರನ್ ಬೆನ್ನಟ್ಟಿದ ಆರ್ಸಿಬಿ 169 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು.

ನಾಲ್ಕನೇ ಪಂದ್ಯದಲ್ಲೂ ಸೋತಿದ್ದ ಆರ್ಸಿಬಿಗೆ ಸತತ 2ನೇ ಸೋಲು ಎದುರಾಗಿತ್ತು. ಈ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಿದ್ದ ಆರ್ಸಿಬಿ ಮೊದಲು ಬ್ಯಾಟ್ ಮಾಡಿ 131 ರನ್ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಮುಂಬೈ 7 ವಿಕೆಟ್ಗಳ ಸುಲಭ ಜಯ ದಾಖಲಿಸಿತ್ತು.

ಐದನೇ ಪಂದ್ಯದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದ ಆರ್ಸಿಬಿ ಯುಪಿ ವಾರಿಯರ್ಸ್ ತಂಡವನ್ನು 23 ರನ್ಗಳಿಂದ ಮಣಿಸಿತ್ತು. ಆರ್ಸಿಬಿ ನೀಡಿದ 198 ರನ್ ಗುರಿ ಬೆನ್ನಟ್ಟಿದ ಯುಪಿ 175 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು.

ಆರನೇ ಪಂದ್ಯದಲ್ಲಿ ಮತ್ತೆ ಸೋಲಿನ ದವಡೆಗೆ ಸಿಲುಕಿದ ಆರ್ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ 19 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಗುಜರಾತ್ ನೀಡಿದ 198 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 180 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

7ನೇ ಪಂದ್ಯದಲ್ಲೂ ಆರ್ಸಿಬಿಗೆ ಸೋಲು ಎದುರಾಗಿತ್ತು. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆಲುವಿಗಾಗಿ ಮಾಡಿದ ಹೋರಾಟ ಸ್ಮರಣೀಯವಾಗಿತ್ತು. ಡೆಲ್ಲಿ ನೀಡಿದ 181 ರನ್ ಬೆನ್ನಟ್ಟಿದ ಆರ್ಸಿಬಿ ಕೇವಲ 1 ರನ್ಗಳಿಂದ ಸೋತಿತ್ತು.

ಲೀಗ್ನ ಕೊನೆಯ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಿದ್ದ ಆರ್ಸಿಬಿ ಹಾಲಿ ಚಾಂಪಿಯನ್ನರನ್ನು 7 ವಿಕೆಟ್ಗಳಿಂದ ಮಣಿಸಿತ್ತು. ಮುಂಬೈ ನೀಡಿದ್ದ 113 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ 3 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತ್ತು.

ಇನ್ನು ಪಾಯಿಂಟ್ ಪಟ್ಟಿಯ ಆಧಾರದ ಮೇಲೆ ಕ್ವಾಲಿಫೈಯರ್ ಹಂತಕ್ಕೆ ಎಂಟ್ರಿಕೊಟ್ಟಿದ ಆರ್ಸಿಬಿ, ಎಲಿಮಿನೆಟರ್ ಪಂದ್ಯದಲ್ಲಿ ಮತ್ತೊಮ್ಮೆ ಮುಂಬೈ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲೂ ಆರ್ಸಿಬಿ, ಮುಂಬೈ ತಂಡವನ್ನು 5 ರನ್ಗಳಿಂದ ಸೋಲಿಸಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.