ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಫೆಬ್ರವರಿ 14 ರಿಂದ ಶುರುವಾಗಲಿರುವ WPL ಸೀಸನ್-3 ಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ನಾಯಕಿಯರನ್ನು ಘೋಷಿಸಿದೆ. ಅದರಂತೆ ಈ ಬಾರಿ 2 ತಂಡಗಳನ್ನು ಹೊಸ ಕ್ಯಾಪ್ಟನ್ಗಳು ಮುನ್ನಡೆಸಲಿದ್ದಾರೆ. ಹಾಗಿದ್ರೆ ಯಾವ ತಂಡಕ್ಕೆ ಯಾರು ನಾಯಕಿ ಎಂದು ನೋಡೋಣ...
ಮುಂಬೈ ಇಂಡಿಯನ್ಸ್: ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಹರ್ಮನ್ಪ್ರೀತ್ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಹೀಗಾಗಿ ಈ ಬಾರಿ ಕೂಡ ಅವರನ್ನೇ ನಾಯಕಿಯಾಗಿ ಮುಂದುವರೆಸಲಾಗಿದೆ.
ಯುಪಿ ವಾರಿಯರ್ಸ್: ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು ಕಳೆದ ಬಾರಿ ಅಲಿಸ್ಸಾ ಹೀಲಿ ಮುನ್ನಡೆಸಿದ್ದರು. ಆದರೆ ಗಾಯದ ಕಾರಣ ಈ ಬಾರಿಯ ಟೂರ್ನಿಯಿಂದ ಹೀಲಿ ಹೊರಗುಳಿದಿದ್ದಾರೆ. ಅದರಂತೆ ಇದೀಗ ಯುಪಿ ವಾರಿಯರ್ಸ್ ತಂಡದ ಹೊಸ ನಾಯಕಿಯಾಗಿ ದೀಪ್ತಿ ಶರ್ಮಾ ಆಯ್ಕೆಯಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ್ತಿ ಮೆಗ್ ಲ್ಯಾನಿಂಗ್ ಈ ಬಾರಿ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಲ್ಯಾನಿಂಗ್ ಮುಂದಾಳತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ಗೆ ಪ್ರವೇಶಿಸಿತ್ತು. ಹಾಗಾಗಿ ಈ ಬಾರಿ ಸಹ ಅನುಭವಿ ಆಟಗಾರ್ತಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ಗುಜರಾತ್ ಜೈಂಟ್ಸ್: ಈ ಬಾರಿಯ ಟೂರ್ನಿಗಾಗಿ ಗುಜರಾತ್ ಜೈಂಟ್ಸ್ ತಂಡ ನಾಯಕಿಯನ್ನು ಬದಲಿಸಿದೆ. ಆಸ್ಟ್ರೇಲಿಯಾ ಆಟಗಾರ್ತಿ ಬೆತ್ ಮೂನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ಗುಜರಾತ್ ಜೈಂಟ್ಸ್ ಫ್ರಾಂಚೈಸಿ, ಆಸೀಸ್ ಆಲ್ರೌಂಡರ್ ಆಶ್ಲೀ ಗಾರ್ಡ್ನರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಹಾಲಿ ಚಾಂಪಿಯನ್ ಆರ್ಸಿಬಿ ತಂಡವನ್ನು ಈ ಬಾರಿ ಕೂಡ ಸ್ಮೃತಿ ಮಂಧಾನ ಅವರೇ ಮುನ್ನಡೆಸಲಿದ್ದಾರೆ. ಕಳೆದ ಬಾರಿ ರಾಯಲ್ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸ್ಮೃತಿ ಈ ಸಲ ಕೂಡ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.