
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಸತತ ಮೂರನೇ ಪಂದ್ಯದಲ್ಲೂ ಸೋತಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಸ್ಮೃತಿ ಮಂಧಾನ ಪಡೆ ಹೀನಾಯವಾಗಿ ಸೋತಿತು. ತಂಡದ ಈ ಕಳಪೆ ಸಾಧನೆಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿತ್ತು.

ಅದರಲ್ಲೂ ತಂಡದ ಬ್ಯಾಟಿಂಗ್ ಬೆನ್ನೇಲುಬಾಗಿರುವ ಎಲ್ಲಿಸ್ ಪೆರ್ರಿ, ಆಶ್ಲೇ ಗಾರ್ಡ್ನರ್ ಎಸೆತದಲ್ಲಿ ಖಾತೆ ತೆರೆಯದೆ ಔಟಾದರು. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಗುಜರಾತ್ ವಿರುದ್ಧ ಶೂನ್ಯಕ್ಕೆ ಔಟಾದ ಪೆರ್ರಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೊನ್ನೆ ಸುತ್ತಿದ ಬೇಡದ ದಾಖಲೆಗೆ ಕೊರಳೊಡ್ಡಿದರು.

ಎಲ್ಲಿಸ್ ಪೆರ್ರಿ ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಪೆರ್ರಿ ಆಡಿರುವ 4 ಪಂದ್ಯಗಳಲ್ಲಿ 127 ಸರಾಸರಿ ಮತ್ತು 160 ಸ್ಟ್ರೈಕ್ ರೇಟ್‌ನೊಂದಿಗೆ 235 ರನ್ ಗಳಿಸಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ಪೆರ್ರಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 56 ಎಸೆತಗಳಲ್ಲಿ 90 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ, ಪೆರ್ರಿ ಒಂಬತ್ತು ಬೌಂಡರಿಗಳು ಮತ್ತು ಮೂರು ಅಮೋಘ ಸಿಕ್ಸರ್‌ಗಳನ್ನು ಬಾರಿಸಿದ್ದರು.

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ವ್ಯಾಟ್ ಕೇವಲ 4 ರನ್ ಗಳಿಸಿ ಔಟಾದರೆ, ಇದಾದ ನಂತರ ಪೆರ್ರಿ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.

ನಾಯಕಿ ಸ್ಮೃತಿ ಮಂಧಾನ ಕೂಡ ಬ್ಯಾಟಿಂಗ್‌ನಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. 20 ಎಸೆತಗಳನ್ನು ಆಡಿದ ಸ್ಮೃತಿ ಕೇವಲ 10 ರನ್ ಗಳಿಸಿ ಔಟಾದರು. ರಾಘವಿ ಬಿಶ್ತ್ 19 ಎಸೆತಗಳಲ್ಲಿ 22 ರನ್ ಗಳಿಸಿದರೆ, ಕನಿಕಾ ಅಹುಜಾ 28 ಎಸೆತಗಳಲ್ಲಿ 33 ರನ್ ಗಳಿಸಿ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲು ನೆರವಾದರು.

ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ ಕೇವಲ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 58 ರನ್ ಗಳಿಸಿ ತಂಡವನ್ನು ಜಯದತ್ತ ಮುನ್ನಡೆಸಿರು. ಗಾರ್ಡ್ನರ್ಗೆ ಸಾಥ್ ನೀಡಿದ ಫೋಬೆ ಲಿಚ್‌ಫೀಲ್ಡ್ 21 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು. ಈ ಜೊತೆಯಾಟದೊಂದಿಗೆ ಗುಜರಾತ್ ತಂಡವು ಬೆಂಗಳೂರು ನೀಡಿದ್ದ ಸವಾಲನ್ನು 16.3 ಓವರ್‌ಗಳಲ್ಲಿ ಪೂರ್ಣಗೊಳಿಸಿತು.