
ಮಹಿಳಾ ಪ್ರೀಮಿಯರ್ ಲೀಗ್ 2024 ರ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು (ಮಾರ್ಚ್ 17) ಫೈನಲ್ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ಋತುವಿನ ಉದ್ದಕ್ಕೂ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡು ಫೈನಲ್ಗೇರಿದೆ.

ಕಳೆದ ಋತುವಿನಂತೆಯೇ, ಈ ಋತುವಿನಲ್ಲಿಯೂ ಸಹ ದೆಹಲಿ ಅದ್ಭುತ ಕ್ರಿಕೆಟ್ ಅನ್ನು ಆಡಿ ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ. ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದು ಚೊಚ್ಚಲ ಫೈನಲ್. ಆರ್ಸಿಬಿ ಪುರುಷರ ತಂಡ ಈವರೆಗೆ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ತಂಡ ಪ್ರಶಸ್ತಿ ಮೇಲೆ ಕಣ್ಣಿದ್ದು ಇತಿಹಾಸ ಸೃಷ್ಟಿಸುತ್ತ ನೋಡಬೇಕಿದೆ.

ಕಳೆದ ವರ್ಷ ಆರ್‌ಸಿಬಿಗೆ ಸೀಸನ್ ತುಂಬಾ ಕೆಟ್ಟದಾಗಿತ್ತು. ಆದರೆ ಈ ಬಾರಿ ಅದ್ಭುತ ಪುನರಾಗಮನವನ್ನು ಮಾಡಿದರು. ಆರ್ಸಿಬಿ ತಮ್ಮ ಮೊದಲ WPL ಟ್ರೋಫಿಯನ್ನು ಗೆಲ್ಲಲು ಎಲ್ಲ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಫೈನಲ್ ಕದನ ನಡೆಯಲಿದೆ. ಆದರೆ ಈ ವರ್ಷ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆಲ್ಲುವ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು ಗೊತ್ತೇ?.

ಮಹಿಳಾ ಪ್ರೀಮಿಯರ್ ಲೀಗ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಆಗ ಪ್ರಶಸ್ತಿ ಗೆದ್ದಿದ್ದಕ್ಕೆ 6 ಕೋಟಿ ರೂ. ನೀಡಲಾಗಿತ್ತು. ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 3 ಕೋಟಿ ರೂಪಾಯಿ ಬಹುಮಾನವನ್ನು ಪಡೆದುಕೊಂಡಿತ್ತು. ಆದರೆ, ಇಲ್ಲಿಯವರೆಗೆ ಮಹಿಳಾ ಪ್ರೀಮಿಯರ್ ಲೀಗ್ 2024ರ ಬಹುಮಾನದ ಮೊತ್ತದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಬಾರಿಯೂ ಡಬ್ಲ್ಯುಪಿಎಲ್ ಗೆದ್ದ ತಂಡಕ್ಕೆ 6 ಕೋಟಿ ರೂ., ರನ್ನರ್ಸ್ ಅಪ್ ತಂಡಕ್ಕೆ 3 ಕೋಟಿ ರೂ. ಬಹುಮಾನ ಸಿಗುವ ನಿರೀಕ್ಷೆ ಇದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ- ಮೆಗ್ ಲ್ಯಾನಿಂಗ್ (ನಾಯಕಿ), ತಾನಿಯಾ ಭಾಟಿಯಾ, ಜೆಮಿಮಾ, ರಾಡ್ರಿಗಸ್, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಮರಿಜಾನ್ನೆ ಕ್ಯಾಪ್, ಶಿಖಾ ಪಾಂಡೆ, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜಾನ್ಸನ್, ಮಿನ್ನು ಮಣಿ, ಪೂನಂ ಯಾದವ್, ಅರುಂಧತಿ ರೆಡ್ಡಿ, ಟಿಟಾಸ್ ಸಾಧು, ರಾಧಾ ಯಾದವ್, ಅಶ್ವನಿ ಕುಮಾರಿ, ಅಪರ್ಣಾ ಮೊಂಡಲ್, ಸ್ನೇಹಾ ದೀಪ್ತಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ- ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ದಿಶಾ ಕಸತ್, ಮೇಘನಾ, ಇಂದ್ರಾಣಿ ರಾಯ್, ಶುಭಾ ಸತೀಶ್, ಸಿಮ್ರಾನ್ ಭಾದೂರ್, ನಡಿನ್ ಡಿ ಕ್ಲರ್ಕ್, ಸೋಫಿ ಡಿವೈನ್, ಶ್ರೇಯಾಂಕಾ ಪಾಟೀಲ್, ಎಲ್ಲಿಸ್ ಪೆರ್ರಿ, ಏಕ್ತಾ ಬಿಶ್ತ್, ಕೇಟ್ ರೆ ಕ್ರಾಸ್, ಕೇಟ್ ಮೊಲಿಸ್, ಠಾಕೂರ್ ಸಿಂಗ್, ಜಾರ್ಜಿಯಾ, ಶ್ರದ್ಧಾ ಪೋಖರ್ಕರ್, ಆಶಾ ಸೋಭಾನಾ.