Ashwin: ಅಶ್ವಿನ್ಗೆ 500 ಚಿನ್ನದ ನಾಣ್ಯ, 1 ಕೋಟಿ ರೂ. ನೀಡಿದ TNCA
ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಅವರನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆ ಸನ್ಮಾನಿಸಿದೆ. ಚೆನ್ನೈನಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಭಾರತ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಎನ್. ಶ್ರೀನಿವಾಸನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
Updated on: Mar 17, 2024 | 7:10 AM

ಭಾರತದ ಪರ ಒಂದೇ ಸರಣಿಯಲ್ಲಿ ಎರಡು ಸಾಧನೆ ಮಾಡಿದ ಟೀಮ್ ಇಂಡಿಯಾ (Team India) ಆಟಗಾರ ರವಿಚಂದ್ರನ್ ಅಶ್ವಿನ್ (R Ashwin) ಅವರನ್ನು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (TNCA) ಗೌರವಿಸಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 100 ಟೆಸ್ಟ್ ಪಂದ್ಯಗಳನ್ನು ಪೂರೈಸಿದ್ದ ಅಶ್ವಿನ್, ಇದೇ ಸರಣಿಯಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದರು.

ಈ ಎರಡು ಮೈಲುಗಲ್ಲನ್ನು ದಾಟಿದ ತಮಿಳುನಾಡು ಆಟಗಾರನಿಗಾಗಿ ಟಿಎನ್ಸಿಎ ವಿಶೇಷ ಕಾರ್ಯಕ್ರಮ ಏರ್ಪಡಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಶ್ವಿನ್ ಅವರಿಗೆ 500 ಚಿನ್ನದ ನಾಣ್ಯಗಳ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

500 ವಿಕೆಟ್ಗಳ ಸಾಧನೆಯನ್ನು ಗೌರವಿಸಿ 500 ಚಿನ್ನದ ನಾಣ್ಯಗಳನ್ನು ನೀಡಲಾಗಿರುವುದು ವಿಶೇಷ. ಇದರ ಜೊತೆಗೆ ಪ್ರೋತ್ಸಾಹಕ ಮೊತ್ತವಾಗಿ 1 ಕೋಟಿ ರೂ. ನೀಡಲಾಯಿತು. ಇನ್ನು ಈ ಸಾಧನೆಯ ಸ್ಮರಣಾರ್ಥ ರವಿಚಂದ್ರನ್ ಅಶ್ವಿನ್ ಅವರ ಅಂಚೆಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಹಾಗೆಯೇ ವಿಶೇಷ ಕಾಣಿಕೆಯಾಗಿ ರಾಜದಂಡವನ್ನು ನೀಡಲಾಯಿತು.

ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದರು. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದರು.

ಹಾಗೆಯೇ ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೂ ಅಶ್ವಿನ್ ಸೇರ್ಪಡೆಯಾಗಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ 14ನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.

ಈ ಸಾಧನೆಗಳನ್ನು ಗೌರವಿಸಿ ಇದೀಗ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಶ್ವಿನ್ ಅವರಿಗೆ 500 ಚಿನ್ನದ ನಾಣ್ಯಗಳು ಮತ್ತು ಒಂದು ಕೋಟಿ ರೂ. ನೀಡಿ ಸನ್ಮಾನಿಸಿದೆ. ಈ ಮೂಲಕ ಸಾಧನೆಯ ಶಿಖರವನ್ನೇರಿರುವ ಟೀಮ್ ಇಂಡಿಯಾ ಆಟಗಾರನಿಗೆ TNCA ವಿಶೇಷ ಗೌರವ ಸಲ್ಲಿಸಿದೆ.
