Virat Kohli: ವಿರಾಟ್ ಕೊಹ್ಲಿಯ ಹೆಸರಿನಲ್ಲಿರುವ ಈ 10 ದಾಖಲೆಗಳನ್ನು ಮುರಿಯುವವರು ಯಾರು?
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 17ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸಾಂಪ್ರಾಯಿಕ ಎದುರಾಳಿಗಳಾದ ಸಿಎಸ್ಕೆ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿರುವುದು ವಿಶೇಷ. ಈ ಹೈವೋಲ್ಟೇಜ್ ಪಂದ್ಯದೊಂದಿಗೆ ಐಪಿಎಲ್ ಸೀಸನ್ 17 ಗೆ ಚಾಲನೆ ದೊರೆಯಲಿದೆ.
Updated on: Mar 17, 2024 | 11:02 AM

IPL 2024: ಐಪಿಎಲ್ ಸೀಸನ್ 17 ಶುಕ್ರವಾರದಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಹೊಸ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ.

ವಿಶೇಷ ಎಂದರೆ ಈ ಪಂದ್ಯದ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಕೂಡ 17ನೇ ಸೀಸನ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಯಾವುದೇ ಆಟಗಾರ ಒಂದೇ ತಂಡದ ಪರ 17 ಸೀಸನ್ ಆಡಿಲ್ಲ. ಇದೀಗ ಈ ಹೊಸ ದಾಖಲೆಯೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್ ಅಭಿಯಾನ ಆರಂಭಿಸಲಿರುವುದು ವಿಶೇಷ.

ಇನ್ನು ಕಳೆದ 16 ಸೀಸನ್ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳು 17ನೇ ಆವೃತ್ತಿಯಲ್ಲೂ ಮುಂದುವರೆಯಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವವರು ಯಾರು ಎಂಬುದೇ ಪ್ರಶ್ನೆ. ಹಾಗಿದ್ರೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯ ಹೆಸರಿನಲ್ಲಿರುವ ಟಾಪ್-10 ದಾಖಲೆಗಳು ಯಾವುವು ಎಂದು ನೋಡೋಣ...

50+ ಸ್ಕೋರ್ ದಾಖಲೆ: ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್ ಬಾರಿಸಿದ ವಿಶೇಷ ದಾಖಲೆ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ. 2016ರ ಆವೃತ್ತಿಯಲ್ಲಿ ಕಿಂಗ್ ಕೊಹ್ಲಿ 11 ಬಾರಿ 50 ಪ್ಲಸ್ ಸ್ಕೋರ್ಗಳಿಸಿದ್ದರು. ಇದರಲ್ಲಿ 7 ಅರ್ಧಶತಕ ಹಾಗೂ 4 ಶತಕಗಳು ಸೇರಿವೆ.

ರನ್ ಸರದಾರ: ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ನಾಯಕ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ನಾಯಕನಾಗಿ ಐಪಿಎಲ್‌ನಲ್ಲಿ 4994 ರನ್ಗಳಿಸಿದರೆ, ಧೋನಿ ನಾಯಕನಾಗಿ 4660 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಜೊತೆಯಾಟದ ದಾಖಲೆ: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಜೋಡಿಯ ದಾಖಲೆಯಲ್ಲೂ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. 2016 ರಲ್ಲಿ ಕಿಂಗ್ ಕೊಹ್ಲಿ ಹಾಗೂ ಎಬಿಡಿ ಜೊತೆಗೂಡಿ ಒಟ್ಟು 939 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಪಂದ್ಯ ಶ್ರೇಷ್ಠ ಆಟಗಾರ: ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಾಗಿ ಕೂಡ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದರು. 2016ರಲ್ಲಿ ವಿರಾಟ್ ಕೊಹ್ಲಿ 5 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದು ಕೂಡ ಒಂದು ದಾಖಲೆಯಾಗಿದೆ.

ಕ್ರಮಾಂಕದ ರನ್ ಸರದಾರ: ಐಪಿಎಲ್‌ನಲ್ಲಿ 2 ಕ್ರಮಾಂಕದಲ್ಲಿ ಕಣಕ್ಕಿಳಿದು ತಲಾ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶೇಷ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಆರಂಭಿಕ ಹಾಗೂ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಇನಿಂಗ್ಸ್ ದಾಖಲೆ: ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಹಾಗೂ 2ನೇ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಐಪಿಎಲ್ ದಾಖಲೆ ಹೊಂದಿದ್ದಾರೆ. ಅಂದರೆ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 3905 ರನ್ ಗಳಿಸಿದ್ದರು. ಹಾಗೆಯೇ ಚೇಸಿಂಗ್ ಮಾಡುವಾಗ 3333 ರನ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

30 ಸ್ಕೋರ್ಗಳ ದಾಖಲೆ: ಐಪಿಎಲ್‌ನಲ್ಲಿ ಅತಿ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 30ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ದಾಖಲೆಯು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 105 ಬಾರಿ ಈ ಸಾಧನೆ ಮಾಡಿದ್ದಾರೆ.

ಅತ್ಯಧಿಕ ರನ್ ದಾಖಲೆ: ಐಪಿಎಲ್‌ನ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದರು. 2016ರಲ್ಲಿ 16 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಒಟ್ಟು 973 ರನ್ ಗಳಿಸಿದ್ದರು.

ಅತೀ ಹೆಚ್ಚು ಶತಕ: ಐಪಿಎಲ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 7 ಶತಕ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ರನ್ ಮೆಷಿನ್: ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲೂ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 7263 ರನ್ಗಳಿಸಿದ್ದಾರೆ.

ಈ ಎಲ್ಲಾ ದಾಖಲೆಗಳೊಂದಿಗೆ ವಿರಾಟ್ ಕೊಹ್ಲಿ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಿಂಗ್ ಕೊಹ್ಲಿ ಹೆಸರಿನಲ್ಲಿರುವ ಈ ಟಾಪ್-10 ದಾಖಲೆಗಳಲ್ಲಿ ಯಾವ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡೋಣ.

TV9 Kannada
Read More
