Updated on: Jun 08, 2023 | 9:58 PM
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತರೂ ಆಸ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಅಲ್ಲದೆ ತಂಡವು 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 268 ಎಸೆತಗಳಲ್ಲಿ 121 ರನ್ ಬಾರಿಸಿ ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದ್ದರು.
ವಿಶೇಷ ಎಂದರೆ ಈ ಶತಕದೊಂದಿಗೆ ಸ್ಟೀವ್ ಸ್ಮಿತ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
ಟೀಮ್ ಇಂಡಿಯಾ ವಿರುದ್ಧ ಅತೀ ಹೆಚ್ಚು ಶತಕ: ಓವಲ್ ಮೈದಾನದಲ್ಲಿ ಶತಕ ಸಿಡಿಸುವುದರೊಂದಿಗೆ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ನ ಜೋ ರೂಟ್ ಭಾರತದ ವಿರುದ್ಧ 9 ಶತಕ ಬಾರಿಸಿದ್ದರು. ಇದೀಗ ಸ್ಮಿತ್ ಕೂಡ 9 ಶತಕ ಸಿಡಿಸಿ ರೂಟ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಆಸೀಸ್ ಶತಕ ವೀರ: ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾ ಆಟಗಾರ ಎಂಬ ದಾಖಲೆ ಸ್ಮಿತ್ ಪಾಲಾಗಿದೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ ಭಾರತದ ವಿರುದ್ಧ 8 ಶತಕ ಬಾರಿಸಿದ್ದರು. ಇದೀಗ ಸ್ಮಿತ್ 9 ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾದ ಸೆಂಚುರಿ ಸ್ಟಾರ್: ಈ ಶತಕದೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ (31) ಮೂರನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ (41) ಹಾಗೂ ಸ್ಟೀವ್ ವಾ (32) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಇಂಗ್ಲೆಂಡ್ನಲ್ಲಿನ ಸೆಂಚುರಿ ಸರದಾರ: ಓವಲ್ ಮೈದಾನದಲ್ಲಿ ಶತಕ ಪೂರೈಸುವುದರೊಂದಿಗೆ ಇಂಗ್ಲೆಂಡ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ (11) ಅಗ್ರಸ್ಥಾನದಲ್ಲಿದ್ದಾರೆ, ಇದೀಗ 7 ಶತಕಗಳೊಂದಿಗೆ ಸ್ಮಿತ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ರನ್ ಸರದಾರ: ಈ ಶತಕದೊಂದಿಗೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ 2000 ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಿಕಿ ಪಾಂಟಿಂಗ್ (2555) ಹಾಗೂ ಮೈಕಲ್ ಕ್ಲಾರ್ಕ್ (2049) ಈ ಸಾಧನೆ ಮಾಡಿದ್ದರು.
ಓವಲ್ನ ಶತಕ ವೀರ: ಓವಲ್ ಮೈದಾನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾ ಆಟಗಾರ ಎಂಬ ದಾಖಲೆ ಕೂಡ ಸ್ಮಿತ್ ಪಾಲಾಗಿದೆ. ಸ್ಮಿತ್ ಈ ಮೈದಾನದಲ್ಲಿ ಇದುವರೆಗೆ 3 ಶತಕಗಳನ್ನು ಬಾರಿಸಿದ್ದಾರೆ.
ಅತೀ ಹೆಚ್ಚು ಶತಕ: ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 11 ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, 9 ಶತಕದೊಂದಿಗೆ ಸ್ಟೀವ್ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ.