Updated on: Jun 10, 2023 | 3:58 PM
WTC Final 2023: ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಮೋಸದಾಟವಾಡಿರುವುದು ಬೆಳಕಿಗೆ ಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (163) ಹಾಗೂ ಸ್ಟೀವ್ ಸ್ಮಿತ್ (121) ಅವರ ಶತಕದ ನೆರವಿನಿಂದ 469 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಕುಸಿತಕ್ಕೊಳಗಾಗಿತ್ತು. ಅಚ್ಚರಿ ಎಂದರೆ ಇದೇ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಲಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ರೋಹಿತ್ ಶರ್ಮಾ (15) ಹಾಗೂ ಶುಭ್ಮನ್ ಗಿಲ್ (13) ಔಟಾದ ಬಳಿಕ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟುವ ಜವಾಬ್ದಾರಿವಹಿಸಿಕೊಂಡಿದ್ದರು. ಒಂದಷ್ಟು ಹೊತ್ತು ಈ ಇಬ್ಬರು ಆಟಗಾರರು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನೂ ಸಹ ಮಾಡಿದ್ದರು.
ಆದರೆ 13 ಓವರ್ಗಳ ಬಳಿಕ ಚೆಂಡು ಹೆಚ್ಚು ಸ್ವಿಂಗ್ ಹಾಗೂ ಬೌನ್ಸ್ ಪಡೆಯಲಾರಂಭಿಸಿತು. ಇತ್ತ ಇದೇ ವೇಳೆ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಔಟಾಗಿದ್ದರು. ಇಲ್ಲಿ ಪೂಜಾರ ಕ್ಯಾಮರೋನ್ ಗ್ರೀನ್ ಎಸೆದ ಇನ್ಸ್ವಿಂಗ್ಗೆ ಔಟಾದರೆ, ವಿರಾಟ್ ಕೊಹ್ಲಿ ಸ್ಟಾರ್ಕ್ ಅವರ ಅನಿರೀಕ್ಷಿತ ಬೌನ್ಸರ್ಗೆ ಕ್ಯಾಚಿತ್ತರು.
ಅಚ್ಚರಿ ಎಂದರೆ ಈ ಓವರ್ಗಳ ನಡುವೆ ಮಾರ್ನಸ್ ಲಾಬುಶೇನ್ ಕ್ರೆಪ್ ಬ್ಯಾಂಡೇಜ್ ಧರಿಸಿ ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ನಲ್ಲಿದ್ದರು. ಅಲ್ಲದೆ ಈ ವೇಳೆ ಒರಾಟದ ಬ್ಯಾಂಡೇಜ್ ಬಟ್ಟೆಯಿಂದ ಚೆಂಡಿನ ಮೇಲ್ಮೈಯನ್ನು ಸವರುತ್ತಿರುವುದು ಕಂಡು ಬಂದಿದೆ.
ಅಂದರೆ ಚೆಂಡಿನ ಒಳ ಮೇಲ್ಮೈಯ ಹೊಳಪನ್ನು ಹೋಗಲಾಡಿಸಿದರೆ ಬಾಲ್ ಉತ್ತಮವಾಗಿ ರಿವರ್ಸ್ ಸ್ವಿಂಗ್ ಆಗುತ್ತದೆ. ಹಾಗೆಯೇ ಚೆಂಡು ಬೌನ್ಸ್ ಆಗಲು ಕೂಡ ನೆರವಾಗುತ್ತದೆ. ಇತ್ತ ಮಾರ್ನಸ್ ಲಾಬುಶೇನ್ ಬ್ಯಾಂಡೇಜ್ನಿಂದ ಚೆಂಡನ್ನು ವಿರೂಪಗೊಳಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಐಸಿಸಿ ನಿಯಮದ ಪ್ರಕಾರ, ಅನುಮತಿಸಲಾದ ಟವೆಲ್ನ್ನು ಹೊರತುಪಡಿಸಿ ಇತರೆ ಯಾವುದೇ ಬಟ್ಟೆಯಿಂದ ಚೆಂಡನ್ನು ಒರೆಸುವಂತಿಲ್ಲ. ಹಾಗೆಯೇ ಎಂಜಲನ್ನು ಕೂಡ ಬಳಸಿ ಚೆಂಡಿನ ಮೇಲ್ಮೈನ ಹೊಳಪನ್ನು ಹೋಗಲಾಡಿಸುವುದನ್ನು ಕೂಡ ನಿಷೇಧಿಸಲಾಗಿದೆ.
ಇದಾಗ್ಯೂ ಫೀಲ್ಡ್ ಅಂಪೈರ್ ಹಾಗೂ ಥರ್ಡ್ ಅಂಪೈರ್ ಈ ಬಗ್ಗೆ ನೀರವ ಮೌನವಹಿಸಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕಳ್ಳಾಟಕ್ಕೆ ಕುಖ್ಯಾತಿ ಹೊಂದಿರುವ ಆಸ್ಟ್ರೇಲಿಯನ್ನರು ಈ ಬಾರಿ ಕೂಡ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ.