ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ಅತಿ ಹೆಚ್ಚು ಕ್ರಿಕೆಟ್ ನೋಡುವ ಜನಸಂಖ್ಯೆ. ಹೆಚ್ಚು ಸಂಭಾವನೆ, ನಿರೀಕ್ಷೆಗೂ ಮೀರಿದ ಸೌಲಭ್ಯ ಪಡೆಯುವ ಟೀಂ ಇಂಡಿಯಾಕ್ಕೆ ಕಳೆದ 10 ವರ್ಷಗಳಿಂದ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲಾಗಿಲ್ಲ. ಡಬ್ಲ್ಯುಟಿಸಿ ಫೈನಲ್ನಲ್ಲಿ ಆಸೀಸ್ ವಿರುದ್ಧ ಸೋತ ಭಾರತ ಮತ್ತೊಮ್ಮೆ ಖಾಲಿ ಕೈಯಲ್ಲಿ ತವರಿಗೆ ಮರಳುತ್ತಿದೆ. ಇದೀಗ ಟೀಂ ಇಂಡಿಯಾದ ಸೋಲಿನ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಭಿನ್ನಿ, ಸೋಲಿಗೆ ವಿಚಿತ್ರ ಕಾರಣ ನೀಡಿದ್ದಾರೆ.
ಓವಲ್‌ನಲ್ಲಿ ನಡೆದ ಫೈನಲ್‌ನ ಕೊನೆಯ ದಿನವಾದ ಜೂನ್ 11 ಭಾನುವಾರದಂದು ಭಾರತ ತಂಡ ಕೇವಲ 234 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ನೀಡಿದ್ದ 444 ರನ್‌ಗಳ ಗುರಿಯ ಮುಂದೆ ಟೀಂ ಇಂಡಿಯಾ 209 ರನ್‌ಗಳ ಹೀನಾಯ ಸೋಲು ಅನುಭವಿಸಿತು.
ಈ ಸೋಲಿನ ನಂತರ ತಂಡದ ಸೋಲಿನ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ನಡುವಿನ ಜೊತೆಯಾಟವೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ವರದಿ ಪ್ರಕಾರ, ಮೊದಲ ದಿನವೇ ಪಂದ್ಯ ಭಾರತದ ಕೈಯಿಂದ ಜಾರಿತು. ಸ್ಮಿತ್ ಮತ್ತು ಹೆಡ್ ದ್ವಿಶತಕದ ಜೊತೆಯಾಟ ಆಡಿಲ್ಲದಿದ್ದರೆ, ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿರುತ್ತಿದ್ದವು ಎಂದು ಬಿನ್ನಿ ಹೇಳಿದ್ದಾರೆ.
ವಾಸ್ತವವಾಗಿ ಬಿನ್ನಿ ನೀಡಿರುವ ಹೇಳಿಕೆ ಅಸಂಬದ್ಧವಾಗಿದೆ ಎಂದೇ ಹೇಳಬಹುದು. ಏಕೆಂದರೆ ಆಸ್ಟ್ರೇಲಿಯಾ ಕೂಡ ಟೀಂ ಇಂಡಿಯಾದಂತೆಯೇ ತಮ್ಮ ಅಗ್ರ ಕ್ರಮಾಂಕದ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ಮಧ್ಯಮ ಕ್ರಮಾಂಕ ಆಸೀಸ್ ತಂಡದ ಕೈ ಹಿಡಿಯಿತು. ಆದರೆ ಟೀಂ ಇಂಡಿಯಾದಲ್ಲಿ ಆ ಹೋರಾಟ ನೋಡಲಿಲ್ಲ. ಅದೇ ರೀತಿ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಆಸೀಸ್ ತಂಡದ ಬ್ಯಾಟ್ಸ್‌ಮನ್‌ಗಳ ನಡುವೆ ಪ್ರಮುಖ ಜೊತೆಯಾಟ ಕಂಡುಬಂತು. ಆದರೆ ಟೀಂ ಇಂಡಿಯಾ ಅಂತಹ ಜೊತೆಯಾವನ್ನು ನಡೆಸಲೇ ಇಲ್ಲ.
ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 469 ರನ್ ಗಳಿಸಿದ್ದು, ಮೊದಲ ದಿನವೇ 327 ರನ್ ಕಲೆಹಾಕಿತು. ಇದರಲಿ ಬಹುಪಾಲು ಸ್ಮಿತ್ ಮತ್ತು ಟ್ರಾವಿಸ್ ಹೆಡ್ ನಡುವೆ ನಡೆದ 285 ರನ್‌ಗಳ ಜೊತೆಯಾಟವೇ ಪ್ರಮುಖವಾಗಿತ್ತು.
ಇನ್ನು ಭವಿಷ್ಯದ ಪಂದ್ಯಾವಳಿ ಬಗ್ಗೆ ಮಾತನಾಡಿದ ಬಿನ್ನಿ, ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಗ್ಗೆ ಗಮನಹರಿಸುವಂತೆ ಟೀಂ ಇಂಡಿಯಾವನ್ನು ಕೇಳಿಕೊಂಡಿದ್ದಾರೆ. ಭವಿಷ್ಯದಲ್ಲಿ ವಿಶ್ವಕಪ್ನಂತಹ ದೊಡ್ಡ ಪಂದ್ಯಾವಳಿ ಇದೆ. ಆದ್ದರಿಂದ ನಾವು ಉತ್ಸಾಹ ಕಳೆದುಕೊಳ್ಳಬಾರದು. ತವರಿನಲ್ಲಿ ವಿಶ್ವಕಪ್ ಆಡುತ್ತಿರುವುದರಿಂದ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಬೇಕು ಎಂದು ಬಿನ್ನಿ ಹೇಳಿದರು.