ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಸೀಸ್ ವಿರುದ್ಧ ಹೀನಾಯ ಸೋಲುಂಡು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟದಿಂದ ಅವಕಾಶ ವಂಚಿತವಾದ ಟೀಂ ಇಂಡಿಯಾಕ್ಕೆ ಐಸಿಸಿ ಭಾರಿ ದಂಡದ ಬರೆ ಎಳೆದಿದೆ. ಟೀಂ ಇಂಡಿಯಾಕ್ಕೆ ಮಾತ್ರವಲ್ಲ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೂ ಐಸಿಸಿ ದಂಡ ವಿಧಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ದಿನದಂದು ಟೀಂ ಇಂಡಿಯಾ ನಿಗಧಿತ ಸಮಯಕ್ಕೆ ಓವರ್ ಮುಗಿಸಿದ ಕಾರಣ ನಿಧಾನಗತಿಯ ಓವರ್ ರೇಟ್ ಆರೋಪದಡಿ ತನ್ನ ಪಂದ್ಯ ಶುಲ್ಕದ ಅಷ್ಟೂ ಹಣವನ್ನು ದಂಡವಾಗಿ ಪಾವತಿಸಬೇಕಾಗಿದೆ. ಟೀಂ ಇಂಡಿಯಾ ತನ್ನ ನಿಗಧಿತ ಸಮಯಕ್ಕಿಂತ ಐದು ಓವರ್ಗಳನ್ನು ಕಡಿಮೆ ಬೌಲ್ ಮಾಡಿದಕ್ಕಾಗಿ ಈ ದಂಡ ವಿಧಿಸಲಾಗಿದೆ.
ಚಾಂಪಿಯನ್ ಆಸ್ಟೇಲಿಯಾ ಕೂಡ ಈ ಶಿಕ್ಷೆಗೆ ಗುರಿಯಾಗಿದ್ದು, ಆಸೀಸ್ ತಂಡ ನಿಗಧಿತ ಸಮಯಕ್ಕಿಂತ 4 ಓವರ್ ಕಡಿಮೆ ಬೌಲ್ ಮಾಡಿದಕ್ಕಾಗಿ ಶೇ. 80 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ಪಾವತಿಸಬೇಕಾಗಿದೆ.
ಇನ್ನು ಮೂರನೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ನೀಡಿದ ವಿವಾದಾತ್ಮಕ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ ಆರೋಪದಡಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೂ ದಂಡ ವಿಧಿಸಲಾಗಿದ್ದು, ಗಿಲ್ ಶೇ.15 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ಕಟ್ಟಬೇಕಾಗಿದೆ.
ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಟೀಕೆ ಮಾಡಿದರೆ ಅಥವಾ ಅನುಚಿತ ಕಾಮೆಂಟ್ ಮಾಡಿದರೆ ಅಂತಹವರನ್ನು ಐಸಿಸಿ ನಿಯಮ 2.7ರ ಅಡಿಯಲ್ಲಿ ದೂಷಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಂಪೈರ್ ತೀರ್ಮಾನವನ್ನು ಟೀಕಿಸಿದ್ದ ಗಿಲ್ಗೆ ಈ ದಂಡವನ್ನು ವಿಧಿಸಲಾಗಿದೆ.
Published On - 1:18 pm, Mon, 12 June 23