WTC Final 2023: ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಒಟ್ಟು 63 ರನ್ಗಳಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಯ ಸರದಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
WTC ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 14 ರನ್ಗಳಿಸಿದ್ದ ಕೊಹ್ಲಿ 2ನೇ ಇನಿಂಗ್ಸ್ನಲ್ಲಿ 49 ರನ್ ಬಾರಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ 5 ಸಾವಿರ ರನ್ ಕಲೆಹಾಕಿದ ವಿಶೇಷ ದಾಖಲೆ ಬರೆದರು.
ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಮಾತ್ರ ಆಸ್ಟ್ರೇಲಿಯಾ ವಿರುದ್ಧ 5 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆ ಹೊಂದಿದ್ದರು. ಮಾಸ್ಟರ್ ಬ್ಲಾಸ್ಟರ್ ಆಸ್ಟ್ರೇಲಿಯಾ ವಿರುದ್ಧ 144 ಇನ್ನಿಂಗ್ಸ್‌ಗಳಲ್ಲಿ (ಏಕದಿನ+ಟೆಸ್ಟ್) ಒಟ್ಟು 6707 ರನ್ ಕಲೆಹಾಕಿದ್ದಾರೆ.
ಇದೀಗ ಆಸ್ಟ್ರೇಲಿಯಾ ವಿರುದ್ಧ ಒಟ್ಟು 93 ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿ 5000+ ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಅಲ್ಲದೆ ಆಸೀಸ್ ವಿರುದ್ದ 5 ಸಾವಿರ ರನ್ ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2000 ರನ್ ಪೂರೈಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ (3630), ವಿವಿಎಸ್ ಲಕ್ಷ್ಮಣ್ (2434), ರಾಹುಲ್ ದ್ರಾವಿಡ್ (2143) ಮತ್ತು ಚೇತೇಶ್ವರ ಪೂಜಾರ (2033) ಈ ಸಾಧನೆ ಮಾಡಿದ್ದರು.