Updated on: Jun 07, 2023 | 4:29 PM
WTC Final 2023: ಇಂಗ್ಲೆಂಡ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಇದಾದ ಬಳಿಕ ರಾಷ್ಟ್ರೀಯ ಗೀತೆ ಹಾಡಲು ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿದ್ದರು. ಅಲ್ಲದೆ ಫೀಲ್ಡಿಂಗ್ ವೇಳೆಯೂ ಎಲ್ಲಾ ಆಟಗಾರರು ಬ್ಲ್ಯಾಕ್ ಅರ್ಮ್ಬ್ಯಾಂಡ್ಸ್ನೊಂದಿಗೆ ಕಾಣಿಸಿಕೊಂಡಿದ್ದರು.
ಹೀಗೆ ಟೀಮ್ ಇಂಡಿಯಾ ಆಟಗಾರರು ಕಪ್ಪು ಧರಿಸಲು ಕಾರಣ ಏನೆಂದು ನೋಡುವುದಾದರೆ, ಇತ್ತೀಚೆಗೆ ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ.
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಲ್ಲಿ 280 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹೀಗೆ ಅಸುನೀಗಿದವರಿಗೆ ಸಂತಾಪ ಸೂಚಿಸಲು ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ.
ಇನ್ನು ಟೀಮ್ ಇಂಡಿಯಾ ಆಟಗಾರರ ಜೊತೆ ಆಸ್ಟ್ರೇಲಿಯನ್ನರೂ ಕೂಡ ಕಪ್ಪು ಪಟ್ಟಿ ಧರಿಸಿ ಸಂತಾಪ ಸೂಚನೆಯಲ್ಲಿ ಕೈ ಜೋಡಿಸಿದ್ದಾರೆ. ಹಾಗೆಯೇ ಫೀಲ್ಡ್ ಅಂಪೈರ್ ಕೂಡ ತೋಳು ಭಾಗದಲ್ಲಿ ಕಪ್ಪು ಪಟ್ಟಿಯನ್ನು ಧರಿಸಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಯಶಸ್ಸು ತಂದುಕೊಟ್ಟಿದ್ದಾರೆ. ಮೊದಲ ಇನಿಂಗ್ಸ್ನ 4ನೇ ಓವರ್ನಲ್ಲಿ ಉಸ್ಮಾನ್ ಖ್ವಾಜಾ (0) ರನ್ನು ಔಟ್ ಮಾಡಿ ಸಿರಾಜ್ ಮಿಯಾ ಮ್ಯಾಜಿಕ್ ತೋರಿಸಿದ್ದಾರೆ.