
WTC Final Qualification Scenario: ಇಂದೋರ್ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸೀಸ್ ಬಳಗವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಿದೆ. ಇದಾಗ್ಯೂ ಜೂನ್ 7 ರಿಂದ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ನಲ್ಲಿ ಕಣಕ್ಕಿಳಿಯುವ 2ನೇ ತಂಡ ಯಾವುದೆಂದು ಇನ್ನೂ ಕೂಡ ನಿರ್ಧಾರವಾಗಿಲ್ಲ.

ಇಲ್ಲಿ ಫೈನಲ್ಗೇರಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶವಿದ್ದರೂ, ಅತ್ತ ಶ್ರೀಲಂಕಾ ತಂಡ ಕೂಡ ಫೈನಲ್ ರೇಸ್ನಲ್ಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದರೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಬಹುದು. ಒಂದು ವೇಳೆ ಭಾರತ ತಂಡ ಸೋತರೆ ಮುಂದಿನ ದಾರಿಗಳೇನು? ಶ್ರೀಲಂಕಾಗೆ ಹೇಗೆ ಅವಕಾಶ ಸಿಗಲಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಅಹಮದಾಬಾದ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ಟೀಮ್ ಇಂಡಿಯಾ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಅರ್ಹತೆ ಪಡೆಯಲಿದೆ. ಅದರಂತೆ ಫೈನಲ್ ಫೈಟ್ನಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಬಹುದು.

ಒಂದು ವೇಳೆ ಸೋತರೆ?...ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಸೋತರೆ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಸರಣಿ ಗೆಲ್ಲುವುದನ್ನು ಎದುರು ನೋಡಬೇಕು. ಅಂದರೆ ಇಲ್ಲಿ ಶ್ರೀಲಂಕಾ ತಂಡಕ್ಕೆ ಅವಕಾಶ ಹೆಚ್ಚಾಗಲಿದೆ.

ಭಾರತ-ಆಸ್ಟ್ರೇಲಿಯಾ ನಡುವಣ ಕೊನೆಯ ಟೆಸ್ಟ್ ಪಂದ್ಯ ಡ್ರಾ ಆದರೆ?...ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡ್ರಾ ಆದರೂ ಟೀಮ್ ಇಂಡಿಯಾದ ಪಾಲಿಗೆ ಮುಳುವಾಗಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದರೂ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡದ ಗೆಲುವಿನ ಮೇಲೆ ಫೈನಲ್ಗೇರುವ ಅವಕಾಶ ಅವಲಂಭಿತವಾಗಲಿದೆ.

ಅಂದರೆ ಇಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡರೆ ಅಥವಾ 2-1 ಅಂತರದಿಂದ ಗೆದ್ದುಕೊಂಡರೆ, ಟೀಮ್ ಇಂಡಿಯಾಗೆ ನೇರವಾಗಿ ಫೈನಲ್ಗೇರಲು ಸಾಧ್ಯವಾಗುವುದಿಲ್ಲ. ಬದಲಾಗಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಎಂಟ್ರಿ ಕೊಡಬಹುದು.

ಇನ್ನು ಭಾರತ ತಂಡವು 3-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದರೆ, ಟೀಮ್ ಇಂಡಿಯಾದ ಫೈನಲ್ ಎಂಟ್ರಿ ಖಚಿತವಾಗಲಿದೆ. ಇಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡರೆ ಅಥವಾ 1-0, 2-0, 1-1 ಅಂತರದಿಂದ ಗೆದ್ದು ಕೊಂಡರೂ ಟೀಮ್ ಇಂಡಿಯಾ ಫೈನಲ್ ಆಡುವುದು ಖಚಿತ.

ಅಂದರೆ ಭಾರತ ತಂಡವು 4ನೇ ಟೆಸ್ಟ್ ಪಂದ್ಯದಲ್ಲಿ ಸೋತರೆ ಮಾತ್ರ ಶ್ರೀಲಂಕಾಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಅವಕಾಶ ದೊರೆಯಲಿದೆ. ಇಲ್ಲಿ ಟೀಮ್ ಇಂಡಿಯಾ 2-2 ಅಥವಾ 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಅಂತ್ಯಗೊಳಿಸಿದರೆ, ಶ್ರೀಲಂಕಾ ತಂಡವು ನ್ಯೂಜಿಲೆಂಡ್ ಅನ್ನು 2-0 ಅಂತರದಿಂದ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.

ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದು. ಒಂದು ವೇಳೆ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಡ್ರಾ ಮಾಡಿಕೊಂಡರೆ ಅಥವಾ ಸೋತರೆ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡದ ಸರಣಿ ಗೆಲುವು ಅಥವಾ ಡ್ರಾ ಅನ್ನು ಎದುರು ನೋಡಬೇಕಾಗುತ್ತದೆ.