148 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲು… ಯಶಸ್ವಿ ಜೈಸ್ವಾಲ್ ವಿಶ್ವ ದಾಖಲೆ
Yashasvi jaiswal Records: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಆಂಗ್ಲರ ನಾಡಿನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಮೂಲಕ ಲೀಡ್ಸ್ ಮೈದಾನದಲ್ಲಿ ಸೆಂಚುರಿ ಸಿಡಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ವಿಶೇಷ ವಿಶ್ವ ದಾಖಲೆಗೂ ಕೊರೊಳೊಡ್ಡಿದ್ದಾರೆ.
Updated on: Jun 21, 2025 | 11:54 AM

ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. 148 ವರ್ಷಗಳಲ್ಲಿ ಯಾವುದೇ ಬ್ಯಾಟರ್ನಿಂದ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi jaiswal) ನಿರ್ಮಿಸಿದ್ದಾರೆ. ಅದು ಕೂಡ ಕೇವಲ 2 ವರ್ಷಗಳಲ್ಲಿ ಎಂಬುದು ವಿಶೇಷ.

ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ ಶುಭಾರಂಭ ಮಾಡಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ 159 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದಾರೆ.

ವಿಶೇಷ ಎಂದರೆ ಇದು ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಇಂಗ್ಲೆಂಡ್ ಟೆಸ್ಟ್ ಸರಣಿ. ಅಂದರೆ ಇಂಗ್ಲೆಂಡ್ ಕಣಕ್ಕಿಳಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿಯೂ ಯುವ ದಾಂಡಿಗ ಯಶಸ್ವಿಯಾಗಿದ್ದಾನೆ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್ ಮೂರು ಪ್ರಮುಖ ದೇಶಗಳ ವಿರುದ್ಧ ಆಡಿದ ವಿದೇಶಿ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಟೆಸ್ಟ್ ಕೆರಿಯರ್ ಶುರು ಮಾಡಿದ ಯಶಸ್ವಿ ಜೈಸ್ವಾಲ್ ಅಂತಹದೊಂದು ಸಾಧನೆ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

2023 ರಲ್ಲಿ ಕೆರಿಬಿಯನ್ ದ್ವೀಪದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 171 ರನ್ ಬಾರಿಸಿದ್ದರು. ಇದಾದ ಬಳಿಕ 2024 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತನ್ನ ಚೊಚ್ಚಲ ಸರಣಿಯ ಮೊದಲ ಪಂದ್ಯದಲ್ಲೇ 161 ರನ್ ಕಲೆಹಾಕಿದ್ದರು. ಇದೀಗ ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಆಡುತ್ತಿರುವ ಜೈಸ್ವಾಲ್ ಶತಕದೊಂದಿಗೆ ಅಬ್ಬರಿಸಿದ್ದಾರೆ.

ಇದರೊಂದಿಗೆ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲಿ ಕಣಕ್ಕಿಳಿದ ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾನೆ.




