
ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ ಯಶಸ್ವಿ ಜೈಸ್ವಾಲ್ ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ ಅಜೇಯ 173 ರನ್ ಬಾರಿಸಿರುವ ಜೈಸ್ವಾಲ್ ಈ ಇನ್ನಿಂಗ್ಸ್‌ನೊಂದಿಗೆ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್‌ರಂತಹ ದಂತಕಥೆಗಳನ್ನು ಹಿಂದಿಕ್ಕಿದರು.

ಈ ಶತಕದ ಇನ್ನಿಂಗ್ಸ್ ಮೂಲಕ ಯಶಸ್ವಿ ಜೈಸ್ವಾಲ್ ಭಾರತದ ಪರ 3,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಕೇವಲ 71 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಜೈಸ್ವಾಲ್, ಸುನಿಲ್ ಗವಾಸ್ಕರ್ ನಂತರ 3,000 ರನ್‌ಗಳನ್ನು ಅತಿ ವೇಗವಾಗಿ ಪೂರೈಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಈ ಮೂಲಕ ಜೈಸ್ವಾಲ್, ಸೌರವ್ ಗಂಗೂಲಿ, ಶುಭ್‌ಮನ್ ಗಿಲ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿಯಂತಹ ಲೆಜೆಂಡರಿ ಆಟಗಾರರನ್ನು ಹಿಂದಿಕ್ಕಿದ್ದಾರೆ. ಶುಭ್‌ಮನ್ ಗಿಲ್ 3,000 ರನ್‌ಗಳನ್ನು ತಲುಪಲು 77 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಗಂಗೂಲಿ 74, ದ್ರಾವಿಡ್ 78 ಮತ್ತು ವಿರಾಟ್ ಕೊಹ್ಲಿ 80 ಇನ್ನಿಂಗ್ಸ್‌ಗಳಲ್ಲಿ 3,000 ರನ್ ಪೂರೈಸಿದ್ದರು.

ಹಾಗೆಯೇ ಈ ದಶಕದಲ್ಲಿ ಭಾರತ ಪರ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ದಾಖಲೆಯೂ ಯಶಸ್ವಿ ಜೈಸ್ವಾಲ್ ಅವರ ಹೆಸರಿನಲ್ಲಿದೆ. ಅವರು 48 ಇನ್ನಿಂಗ್ಸ್‌ಗಳಲ್ಲಿ 19 ಬಾರಿ ಈ ದಾಖಲೆಯನ್ನು ಮೀರಿಸಿದ್ದಾರೆ. ರೋಹಿತ್ ಶರ್ಮಾ 14 ಬಾರಿ ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, ಶುಭಮನ್ ಗಿಲ್ ಈ ದಾಖಲೆಯನ್ನು ಕೇವಲ ಆರು ಬಾರಿ ಮಾಡಿದ್ದಾರೆ. ಸ್ಪಷ್ಟವಾಗಿ, ಯಶಸ್ವಿ ಜೈಸ್ವಾಲ್ ಪ್ರಸ್ತುತ ನಾಯಕ ಶುಭ್‌ಮನ್ ಗಿಲ್‌ಗಿಂತ ಮೂರು ಪಟ್ಟು ಮುಂದಿದ್ದಾರೆ.

ಇದು ಮಾತ್ರವಲ್ಲದೆ 145 ಎಸೆತಗಳಲ್ಲಿ ತಮ್ಮ ಏಳನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದ ಜೈಸ್ವಾಲ್ ಕೇವಲ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದು, ಇದೀಗ ಮೂರನೇ ದ್ವಿಶತಕವನ್ನು ಬಾರಿಸುವ ಹೊಸ್ತಿಲಿನಲಿದ್ದಾರೆ. ಇದೀಗ ಎರಡನೇ ದಿನದಾಟದಲ್ಲಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್ ಅನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.