
ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಝಿಂಬಾಬ್ವೆ ತಂಡವು ಅಮೋಘ ಗೆಲುವು ದಾಖಲಿಸಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು ಕೇವಲ 80 ರನ್ಗಳಿಗೆ ಆಲೌಟ್ ಮಾಡುವಲ್ಲಿ ಆತಿಥೇಯರು ಯಶಸ್ವಿಯಾದರು.

ಇದು ಝಿಂಬಾಬ್ವೆ ವಿರುದ್ಧ ಪೂರ್ಣ ಸದಸ್ಯ ರಾಷ್ಟ್ರವೊಂದು ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ. ಅಂದರೆ ಟೆಸ್ಟ್ ಆಡುತ್ತಿರುವ ದೇಶಗಳ ಪೈಕಿ ಯಾವುದೇ ತಂಡ ಝಿಂಬಾಬ್ವೆ ವಿರುದ್ಧ 90 ಕ್ಕಿಂತ ಕಡಿಮೆ ಸ್ಕೋರ್ಗಳಿಸಿರಲಿಲ್ಲ.

ಇದಕ್ಕೂ ಮುನ್ನ 2021 ರಲ್ಲಿ ಹರಾರೆಯಲ್ಲಿ ನಡೆದ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಝಿಂಬಾಬ್ವೆ 99 ರನ್ಗಳಿಗೆ ಆಲೌಟ್ ಮಾಡಿದ್ದರು. ಇದು ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಝಿಂಬಾಬ್ವೆ ತಂಡದ ಶ್ರೇಷ್ಠ ಪ್ರದರ್ಶನವಾಗಿತ್ತು.

ಇದೀಗ ಶ್ರೀಲಂಕಾ ತಂಡವನ್ನು ಕೇವಲ 80 ರನ್ಗಳಿಗೆ ಆಲೌಟ್ ಮಾಡಿ ಝಿಂಬಾಬ್ವೆ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಲಂಕಾ ಪಡೆಯನ್ನು 2ನೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ತಂಡವೆಂಬ ಹೆಗ್ಗಳಿಕೆಯನ್ನು ಝಿಂಬಾಬ್ವೆ ತನ್ನದಾಗಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 81 ರನ್ಗಳ ಗುರಿಯನ್ನು ಝಿಂಬಾಬ್ವೆ ತಂಡವು 14.2 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಝಿಂಬಾಬ್ವೆ 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.