ಬರೋಬ್ಬರಿ 286 ರನ್ಗಳು: ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಬರೆದ ಝಿಂಬಾಬ್ವೆ
Seychelles vs Zimbabwe: ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಝಿಂಬಾಬ್ವೆ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ನೈರೋಬಿಯಾ ಜಿಮ್ಖಾನ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೆಶೆಲ್ಸ್ ವಿರುದ್ಧ ಬರೋಬ್ಬರಿ 286 ರನ್ ಬಾರಿಸಿ ಸಿಕಂದರ್ ರಾಝ ಪಡೆ ವಿಶೇಷ ದಾಖಲೆ ಬರೆದಿದೆ.
1 / 7
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ಟಾಪ್-3 ತಂಡಗಳ ಪಟ್ಟಿಗೆ ಝಿಂಬಾಬ್ವೆ ಕೂಡ ಎಂಟ್ರಿ ಕೊಟ್ಟಿದೆ. ಅದು ಸಹ ಬರೋಬ್ಬರಿ 286 ರನ್ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ 280 ಕ್ಕೂ ಅಧಿಕ ಸ್ಕೋರ್ಗಳಿಸಿದ ವಿಶ್ವದ 3ನೇ ತಂಡ ಎನಿಸಿಕೊಂಡಿದೆ.
2 / 7
ಮುಂಬರುವ ಟಿ20 ವಿಶ್ವಕಪ್ನ ಆಫ್ರಿಕಾ ಕ್ವಾಲಿಫೈಯರ್ ಟೂರ್ನಿಯ 2ನೇ ಪಂದ್ಯದಲ್ಲಿ ಝಿಂಬಾಬ್ವೆ ಈ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೆಶೆಲ್ಸ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಕೇವಲ 35 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 91 ರನ್ ಬಾರಿಸಿದ್ದರು.
3 / 7
ಇನ್ನು ವಿಕೆಟ್ ಕೀಪರ್ ಬ್ಯಾಟರ್ ತಡಿವಾನಾಶೆ ಮರುಮಣಿ 37 ಎಸೆತಗಳಲ್ಲಿ 5 ಸಿಕ್ಸ್, 10 ಫೋರ್ಗಳೊಂದಿಗೆ 86 ರನ್ ಚಚ್ಚಿದರು. ಆ ಬಳಿಕ ಬಂದ ನಾಯಕ ಸಿಕಂದರ್ ರಾಝ ಕೇವಲ 13 ಎಸೆತಗಳಲ್ಲಿ ಅಜೇಯ 36 ರನ್ ಬಾರಿಸಿದರು. ಈ ಮೂಲಕ ಝಿಂಬಾಬ್ವೆ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು.
4 / 7
ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ಕಲೆಹಾಕಿದ ಟೆಸ್ಟ್ ಆಡುವ ವಿಶ್ವದ 2ನೇ ತಂಡ ಎಂಬ ಹೆಗ್ಗಳಿಕೆಗೆ ಝಿಂಬಾಬ್ವೆ ಪಾತ್ರವಾಯಿತು. ಅಲ್ಲದೆ ಚುಟುಕು ಕ್ರಿಕೆಟ್ನಲ್ಲಿ ಬೃಹತ್ ಮೊತ್ತ ದಾಖಲಿಸಿದ ವಿಶ್ವದ ಮೂರನೇ ತಂಡವೆಂಬ ದಾಖಲೆಯನ್ನು ಸಹ ಝಿಂಬಾಬ್ವೆ ತನ್ನದಾಗಿಸಿಕೊಂಡರು.
5 / 7
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನೇಪಾಳ ತಂಡ. 2023 ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದೆ.
6 / 7
ಇನ್ನು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 297 ರನ್ ಕಲೆಹಾಕಿ ಈ ದಾಖಲೆ ಬರೆದಿದೆ.
7 / 7
ಇದೀಗ ಸೆಶೆಲ್ಸ್ ವಿರುದ್ಧ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ 286 ರನ್ ಬಾರಿಸಿ ಝಿಂಬಾಬ್ವೆ ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಇನ್ನು ಈ ಪಂದ್ಯದಲ್ಲಿ ಝಿಂಬಾಬ್ವೆ ನೀಡಿದ 286 ರನ್ಗಳ ಗುರಿಯನ್ನು ಬೆನ್ನತ್ತಿದ ಸೆಶೆಲ್ಸ್ ತಂಡದ ಇನಿಂಗ್ಸ್ಗೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, 6.1 ಓವರ್ಗಳಲ್ಲಿ 95 ರನ್ಗಳ ಗುರಿ ನೀಡಲಾಯಿತು. ಆದರೆ 6.1 ಓವರ್ಗಳಲ್ಲಿ ಸೆಶೆಲ್ಸ್ ತಂಡವು ಕೇವಲ 18 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಝಿಂಬಾಬ್ವೆ ತಂಡ 75 ರನ್ಗಳ ಭರ್ಜರಿ ಜಯ ಸಾಧಿಸಿದೆ.