ಇರುವೆಗಳ ಪರಿಶ್ರಮದ ಕುರಿತಾಗಿ ಹಲವು ಕವನಗಳು/ ಕಥೆಗಳಿವೆ. ಆದರೆ ಇರುವೆ ಭೂಮಿಯ ಮೇಲಿರುವ ವೈಶಿಷ್ಟ್ಯಪೂರ್ಣ ಜೀವಿಗಳಲ್ಲಿ ಒಂದು ಎನ್ನುವುದು ನಿಮಗೆ ತಿಳಿದಿದೆಯೇ? ಎಲ್ಲಾ ಜೀವಿಗಳಿಗೆ ಅವಶ್ಯಕವಾದ ನಿದ್ದೆಯನ್ನೇ ಇರುವೆಗಳು ಮಾಡುವುದಿಲ್ಲ.
ದಿನವೂ ನಾವು ಇರುವೆಗಳನ್ನು ಗಮನಿಸುತ್ತೇವೆ. ಆದರೆ ಅದರ ವೈಶಿಷ್ಟ್ಯಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಇರುವೆಗಳು ತಮ್ಮ ಜೀವನವಿಡೀ ನಿದ್ರೆ ಮಾಡುವುದಿಲ್ಲ. ಹಾಗಾದರೆ ಅವು ವಿಶ್ರಾಂತಿ ಪಡೆಯುವುದು ಹೇಗೆ? ಅವುಗಳು ಒಂದು ನಿಮಿಷಕ್ಕೂ ಕಡಿಮೆ ಅವಧಿಯ ಕಿರು ವಿಶ್ರಾಂತಿ ಪಡೆಯುತ್ತವೆ.
ಇರುವೆಗಳು ತಮ್ಮ ತೂಕಕ್ಕಿಂತ ಹೆಚ್ಚು ಭಾರವನ್ನು ಎತ್ತಬಲ್ಲವು. ಕೆಲವು ಆಹಾರ ಪದಾರ್ಥಗಳನ್ನು ಕೊಂಡೊಯ್ಯಬೇಕಾದರೆ, ಇರುವೆಗಳು ತಮ್ಮ ತೂಕಕ್ಕಿಂತ ಹೆಚ್ಚಿನದನ್ನು ಎತ್ತುತ್ತವೆ. ಇರುವೆಗಳ ಕೆಲಸ ನಿಶ್ಚಿತವಾಗಿದ್ದು, ಇತರ ಜೀವಿಗಳಂತೆ ಕಾಲಾನಂತರದಲ್ಲಿ ತಮ್ಮ ಕುಟುಂಬವನ್ನು ವಿಸ್ತರಿಸುವಂತೆಯೇ ಇವುಗಳೂ ವಿಸ್ತರಿಸುತ್ತವೆ.
ವೈಜ್ಞಾನಿಕ ಮಾಹಿತಿಯ ಪ್ರಕಾರ, ಇಡೀ ಜಗತ್ತಿನಲ್ಲಿ 10 ಸಾವಿರಕ್ಕೂ ಹೆಚ್ಚು ಇರುವೆಗಳ ಜಾತಿಗಳು ಕಂಡುಬರುತ್ತವೆ. ಅವುಗಳ ಗಾತ್ರ 2 ರಿಂದ 7 ಮಿಲಿಮೀಟರ್ ಉದ್ದವಿರಬಹುದು. ಒಂದು ಚಿಕ್ಕ ಇರುವೆಯಲ್ಲಿಯೂ ಸುಮಾರು 2.5 ಲಕ್ಷ ಮೆದುಳಿನ ಜೀವಕೋಶಗಳಿವೆ. ಈ ಜೀವಕೋಶಗಳ ಕಾರಣದಿಂದಾಗಿ, ಇರುವೆ ನಿದ್ದೆ ಮಾಡದೆ ತನ್ನ ಮೆದುಳನ್ನು ಸಕ್ರಿಯವಾಗಿರಿಸಿಕೊಳ್ಳುತ್ತದೆ.
ಇರುವೆಗಳಲ್ಲಿಯೂ ಅಸ್ತಿತ್ವಕ್ಕಾಗಿ ಹೋರಾಟವಿದೆ. ಒಂದು ಗುಂಪು/ ಕುಲದ ಮೇಲೆ ಮತ್ತೊಂದು ತಂಡ ದಾಳಿ ಮಾಡಿ, ಇರುವೆಗಳು ಪ್ರಾಣ ಕಳೆದುಕೊಳ್ಳುವುದೂ ಇದೆ.
ಹೀಗೆ ಇರುವೆಗಳನ್ನು ನಾವು ಪ್ರತಿದಿನ ನೋಡುತ್ತಿದ್ದರೂ ಅವುಗಳ ಬಗ್ಗೆ ಅರಿವಿರುವುದು ಕಡಿಮೆ. ಈ ಮಾಹಿತಿಗಳನ್ನು ತಿಳಿದ ಮೇಲೆ ನಿಮಗೇನನ್ನಿಸಿತು?