ನಟ ರಾಕ್ಷಸ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ವೈದ್ಯೆ ಧನ್ಯತಾ ಜೊತೆಗೆ ವಿವಾಹ ಬಂಧಕ್ಕೆ ಒಳಗಾಗುತ್ತಿರುವುದಾಗಿ ಡಾಲಿ ಕೆಲ ದಿನಗಳ ಹಿಂದೆಯೇ ಘೋಷಣೆ ಮಾಡಿದ್ದಾರೆ.
ಇಂದು (ನವೆಂಬರ್ 17) ರಂದು ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ನಿಶ್ಚಿತಾರ್ಥ ಮತ್ತು ಲಗ್ನ ಪತ್ರಿಕೆ ಬರೆಸುವ ಶಾಸ್ತ್ರ ಸರಳವಾಗಿ, ಹಿರಿಯಲು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ.
ಡಾಲಿ ಧನಂಜಯ್ ಅವರ ಅರಸೀಕೆರೆಯ ಕಾಳೇನಹಳ್ಳಿಯಲ್ಲಿಯ ಮನೆಯಲ್ಲಿ ಲಗ್ನ ಶಾಸ್ತ್ರ ಮತ್ತು ನಿಶ್ಚಿತಾರ್ಥದ ಕಾರ್ಯಕ್ರಮ ಸರಳವಾಗಿ ನಡೆದಿದೆ.
ಡಾಲಿ ಧನಂಜಯ್ ಅವರು ತಮ್ಮ ಭಾವಿ ಪತ್ನಿ ಧನ್ಯತಾ ಅವರ ಬೆರಳಿಗೆ ಉಂಗುರ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನ್ಯತಾ ಅವರೂ ಸಹ ಡಾಲಿ ಬೆರಳಿಗೆ ಉಂಗುರ ತೊಡಿಸಿದ್ದಾರೆ.
ಲಗ್ನ ಬರೆಸುವ ಶಾಸ್ತ್ರವೂ ಇಂದು ನಡೆದಿದ್ದು, ಗುರು-ಹಿರಿಯರು, ಬಂಧುಗಳ ಎದುರು ಮದುವೆ ದಿನಾಂಕವನ್ನೂ ಸಹ ನಿಗದಿ ಮಾಡಲಾಗಿದೆ. ಡಾಲಿ ಧನಂಜಯ್ ಮದುವೆ ಫೆಬ್ರವರಿ 16 ರಂದು ನಡೆಯಲಿದೆ.
ಡಾಲಿ ಧನಂಜಯ್ ಪತ್ನಿ ಧನ್ಯತಾ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿ, ಕುಟುಂಬದವರೂ ಒಪ್ಪಿ ಮದುವೆ ಆಗುತ್ತಿದ್ದಾರೆ. ಧನ್ಯತಾ ಸಹ ಕಷ್ಟಪಟ್ಟು ಸಾಧನೆ ಮಾಡಿದ ಯುವತಿ ಆಗಿದ್ದಾರೆ.
ಡಾಲಿ ಧನಂಜಯ್ ಪ್ರಸ್ತುತ ನಟನಾಗಿ, ನಿರ್ಮಾಪಕನಾಗಿ, ಗೀತ ಬರಹಗಾರನಾಗಿ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಕನ್ನಡ, ತೆಲುಗಿನ ಹಲವು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.