ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೂಡ ದೀಪಾವಳಿ ಸಂಭ್ರಮ ಜೋರಾಗಿದೆ. ಮಂತ್ರಾಲಯ ಮಾಠವೂ ಸೇರಿದಂತೆ ರಾಯಚೂರಿನಾದ್ಯಂತ ದೀಪಾವಳಿ ಸಂಭ್ರಮ ಮುಗಿಲುಮುಟ್ಟಿದೆ.
ದೀಪಾವಳಿ ಹಬ್ಬದ ಸಂದರ್ಭ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದು, ದರ್ಶನ ಪಡೆದರು.
ರಾಯಚೂರಿನ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪೂಜಾ ಕೈಂಕರ್ಯ ನೆರವೇರಿಸಿದರು. ಕಾರ್ತಿಕ ಮಹಾಮಂಗಳಾರತಿ ಮೂಲಕ ವಿಶೇಷ ಆಚರಣೆಗಳಿಗೆ ಚಾಲನೆ ನೀಡಿದರು.
ವಿಶೇಷ ಪೂಜೆಯ ಬಳಿಕ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಪೂಜೆ ನೆರವೇರಿಸಿದರು. ಬಳಿಕ ಗೋ ಪೂಜೆ ನೆರವೇರಿತು. ಅದಾಗಿ ನಾರಿಕೃತ ನೀರಾಜನ, ತೈಲಾಭ್ಯಂಜನ ಕಾರ್ಯಕ್ರಮ ನಡೆಯಿತು.
ವಿಶೇಷ ಪೂಜೆಯ ಬಳಿಕ ಮಠದಲ್ಲಿ ಸೇರಿದ ನೂರಾರು ಭಕ್ತರಿಗೆ ಸುಬುಧೇಂದ್ರ ಶ್ರೀಗಳು ಪ್ರವಚನ ನೀಡಿದರು. ಬಳಿಕ ಭಕ್ತರು ಸುಬುಧೇಂದ್ರ ಶ್ರೀಗಳಿಂದ ಮಂತ್ರಾಕ್ಷತೆ ಪಡೆದರು.
ಪ್ರತಿ ವರ್ಷ ಮಂತ್ರಾಲಯದಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷ ಕೂಡ ದೀಪಾಳಿ ಆಚರಣೆ ನಡೆಯುತ್ತಿದೆ.
ದೀಪಾವಳಿಯ ಶುಭ ಸಂದರ್ಭದಲ್ಲಿ ಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ದಿನವೂ ಹೆಚ್ಚಿನ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸುತ್ತಿದ್ದು, ರಾಯರ ದರ್ಶನ ಹಾಗೂ ಶ್ರೀಗಳಿಂದ ಮಂತ್ರಾಕ್ಷತೆ ಪಡೆಯುತ್ತಿದ್ದಾರೆ.