Updated on: Feb 23, 2022 | 8:34 PM
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ . ಈ ಅಪ್ಲಿಕೇಶನ್‌ನ ಹೆಸರು ಟ್ರೂತ್ ಸೋಷಿಯಲ್ (Truth social app). ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ ಹೊಸ ಅಪ್ಲಿಕೇಶನ್ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಗೂಗಲ್ ಪ್ಲೇಸ್ಟೋರ್ ನಲ್ಲೂ ಡೌನ್ಲೋಡ್ಗೆ ಲಭ್ಯವಿರಲಿದೆ. ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ ಬ್ಯಾನ್ ಮಾಡಿತ್ತು. ಈ ವೇಳೆಯೇ ಹೊಸ ಸೋಷಿಯಲ್ ಮೀಡಿಯಾ ಆ್ಯಪ್ ಪರಿಚಯಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದೀಗ ಟ್ರೂತ್ ಸೋಷಿಯಲ್ ಹೆಸರಿನ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದು, ಬಿಡುಗಡೆಯಾದ ಮೊದಲ ದಿನವೇ Apple ಆ್ಯಪ್ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಆದ ಅಪ್ಲಿಕೇಶನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇದೊಂದು ಉಚಿತ ಸೋಷಿಯಲ್ ಮೀಡಿಯಾ ಆ್ಯಪ್ ಆಗಿದ್ದು, ಹೀಗಾಗಿ ಹೆಚ್ಚಿನವರು ಟ್ರೂತ್ ಸೋಷಿಯಲ್ ಬಳಕೆಗೆ ಮುಂದಾಗಿದ್ದಾರೆ. ಆದರೆ ಬಿಡುಗಡೆಯಾದ ಬೆನ್ನಲ್ಲೇ ಟ್ರೂತ್ ಸೋಷಿಯಲ್ನಲ್ಲಿ ತಾಂತ್ರಿಕ ದೋಷಗಳು ಕಂಡು ಬರುತ್ತಿದೆ ಎಂಬ ದೂರು ಕೂಡ ಕೇಳಿ ಬರುತ್ತಿದೆ.
ಈ ಅಪ್ಲಿಕೇಶನ್‌ನಲ್ಲಿ ಖಾತೆಯನ್ನು ರಚಿಸುವಲ್ಲಿ ಅನೇಕ ಜನರು ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಾಗ್ಯೂ ಕಂಪೆನಿ ಕಡೆಯಿಂದ ಸಮಸ್ಯೆಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಅನೇಕ ಬಳಕೆದಾರರು ಇತರೆ ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಅಂದಹಾಗೆ ಟ್ರೂತ್ ಸೋಷಿಯಲ್ ಆ್ಯಪ್ ಅನ್ನು ಟ್ವಿಟರ್ ಹಾಗೂ ಫೇಸ್ಬುಕ್ಗೆ ಪರ್ಯಾಯ ಅಪ್ಲಿಕೇಶನ್ ಎಂದು ಟ್ರೂತ್ ಸೋಶಿಯಲ್ ಆ್ಯಪ್‌ನ ಸಿಇಒ ಡೆವಿನ್ ನನ್ಸ್ ತಿಳಿಸಿದ್ದು, ಬಳಕೆದಾರರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ವಾದಗಳು ಮುಂದಿಡಬಹುದು ಎಂದು ಹೇಳಿದ್ದಾರೆ.
ಕಳೆದ ವರ್ಷ ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್ ಹಿಲ್ ಗಲಭೆಗೆ ಟ್ರಂಪ್ ಅವರ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಅವರನ್ನು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ನಿರ್ಬಂಧಿಸಲಾಯಿತು. ಹೀಗಾಗಿ ಇದೀಗ ಡೊನಾಲ್ಡ್ ಟ್ರಂಪ್ ತಮ್ಮದೇ ಆ್ಯಪ್ ಅನ್ನು ಬಿಡುಗಡೆ ಮಾಡುವ ಫೇಸ್‌ಬುಕ್, ಟ್ವಿಟರ್ಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ.