
ಸಮುದ್ರದಂತೆ ಹರಡಿರುವ ಪ್ರವಾಹ. ಜೊತೆಗೆ ಬೋರ್ಗರೆಯುವ ಗಾಳಿ ಮಳೆ. ಅದೇ ಮಳೆ ಗಾಳಿಯ ಮಧ್ಯೆ ದೋಣಿಯಲ್ಲಿ ಪ್ರವಾಹ ದಾಟುವ ಸಾಹಸ. ಇದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೇಂಗೂರು ಸಮೀಪದ ದೋಣಿಕಡವು ಗ್ರಾಮದ ಪರಿಸ್ಥಿತಿ.

ದೋಣಿಕಡವು ಒಂಥರಾ ನತದೃಷ್ಟ ಗ್ರಾಮ. ಪ್ರತಿ ವರ್ಷ ಮಳಗಾಲ ಬಂದಾಗಲೆಲ್ಲಾ ಈ ಗ್ರಾಮ ದ್ವೀಪವಾಗುತ್ತದೆ. ಕೂಡಕಂಡಿ, ಪರಂಬು, ಪೈಸಾರಿ ಭಾಗದ 70ಕ್ಕೂ ಅಧಿಕ ಕುಟುಂಬಗಳಿಗೆ ಜಲ ದಿಗ್ಬಂಧನವಾಗುತ್ತದೆ.

ಈ ಪ್ರದೇಶದ ಮಹಿಳೆಯರು ಮಕ್ಕಳು ವೃದ್ಧರು ವಿದ್ಯಾರ್ಥಿಗಳು ಎಲ್ಲರೂ ಹೊಳೆ ದಾಟಲಾಗದೆ ಪರದಾಡುತ್ತಾರೆ. ಅನಿವಾರ್ಯ ಇರುವವರು ನಾಡ ದೋಣಿಯಲ್ಲಿ ಅಪಾಯಕಾರಿ ಪ್ರವಾಹ ದಾಟಬೇಕಾಗಿದೆ. ಮಳೆಗಾಲದಲ್ಲಿ ಕಾವೇರಿ ಉಕ್ಕಿ ಹರಿಯುವ ಪರಿಣಾಮ ಬೇಂಗೂರು ಮತ್ತು ಪರಂಬು ಪೈಸಾರಿ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸಂದರ್ಭ ಗ್ರಾಮಸ್ಥರು ಅ20 ಅಡಿ ಆಳದ ಪ್ರವಾಹವನ್ನ ದಾಟಲು ದೋಣಿ ಬಳಸುತ್ತಾರೆ. ಇವರಿಗೆ 8 ಕಿಲೋ ಮಿಟರ್ ದೂರದ ಪರ್ಯಾಯ ರಸ್ತೆ ಇದ್ದರೂ ಅದು ಸುರಕ್ಷಿತವಾಗಿಲ್ಲ.

ಭಾಮಂಡಲದಲ್ಲಿ ಮಳೆ ಇಳಿಕೆಯಾಗಿದ್ದರೂ ಪ್ರವಾಹ ಇಳಿದಿಲ್ಲ. ಹಾಗಾಗಿ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ಪಿಂಡ ಪ್ರಧಾನ ಹಾಗೂ ಪವಿತ್ರ ಸ್ನಾನಕ್ಕೆ ಅಡ್ಡಿಯಾಗಿದೆ. ಸ್ನಾನ ಘಟ್ಟ, ಬಟ್ಟ ಬದಲಾಯಿಸುವ ಸ್ಥಳ, ಪೂಜಾ ಸ್ಥಳ, ಪಾರ್ಕಿಂಗ್ ಏರಿಯಾ ಎಲ್ಲವೂ ಮುಳುಗಡೆಯಾಗಿರುವುದರಿಂದ ಭಕ್ತರು ಫ್ಲೈ ಓವರ್ ಕೆಳಗೆ ಪಿಂಡ ಪ್ರಧಾನ ಮಾಡುವಂತಾಗಿದೆ. ತ್ರಿವೇಣಿ ಸಂಗಮದ ನೂತನ ಉದ್ಯಾನವನ ಪ್ರವಾಹದಲ್ಲಿ ಜಲಾವೃತವಾಗಿದ್ದು, ಅದರ ಮೆಟ್ಟಿಲುಗಳ ಮೇಲೆಯೇ ಭಕ್ತರು ಪಿಮಡ ಪ್ರಧಾನ ಮಾಡಿ ಕಾರ್ಯ ಮುಗಿಸುತ್ತಿದ್ದಾರೆ.

ಮಂಗಳವಾರದ ಮಳೆಗೆ ಮಡಿಕೇರಿ ತಾಲ್ಲೂಕಿನ ಮೂರ್ನಾಡು ನಾಪೋಕ್ಲು ರಸ್ತೆ ಮೇಲೆ ಕಾವೇರಿ ನದಿ ನೀರು ಹರಿದಿದ್ದು ವಾಹನಗಳು ಒಡಾಡುವುದು ಕಷ್ಟವಾಗಿದೆ. ಮತ್ತೊಂದೆಡೆ ನಾಪೋಕ್ಲು, ಬೊಳಿಬಾಣೆ ಸಂಪರ್ಕವೂ ಕಡಿತವಾಗಿದೆ.
Published On - 2:13 pm, Wed, 18 June 25