Updated on: Jun 29, 2023 | 11:16 AM
ಕಲಬುರಗಿ: ಅಲ್ಲಿ ಬಂಧು ಬಾಂಧವರು ಸೇರಿದ್ದರು. ಮುಂಜಾನೆಯಿಂದ ಮದುವೆ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆದಿದ್ದವು. ಊಟಕ್ಕೆ ತರಹೇವಾರಿ ತಿನಿಸುಗಳು ಸಿದ್ದವಾಗಿದ್ದವು. ನೂರಾರು ಮಹಿಳೆಯರು ಸೋಬಾನೆ ಪದಗಳನ್ನು ಹಾಡ್ತಿದ್ದರು. ಇನ್ನೇನು ವರನಿಂದ ವಧುವಿಗೆ ತಾಳಿ ಕಟ್ಟಿದರೆ, ಮದುವೆ ಶಾಸ್ತ್ರ ಮುಗಿಯುತಿತ್ತು. ಆದ್ರೆ ಅಷ್ಟರಲ್ಲೇ ವರ ದಿ ಗ್ರೆಟ್ ಎಸ್ಕೇಪ್ ಆಗಲು ಮುಂದಾಗಿದ್ದ. ಇದನ್ನು ಗಮನಿಸಿದ ಜನರು, ವರನನ್ನು ಹಿಡಿದು ತಂದು, ಕಾಲು ಕಟ್ಟಿ, ವಧುವಿಗೆ ತಾಳಿ ಕಟ್ಟಿಸಿದ್ದಾರೆ. ಇದು ಅಚ್ಚರಿಯಾದರು ಕೂಡಾ ಸತ್ಯ.
ಆದರೆ ಇಂತಹದೊಂದು ಘಟನೆ ನಡೆದಿದ್ದು ಕಪ್ಪೆಗಳ ಮದುವೆಯಲ್ಲಿ ಅನ್ನೋದು ಮಾತ್ರ ಅಚ್ಚರಿ! ಹೌದು ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ನಿನ್ನೆ ಕಪ್ಪೆಗಳಿಗೆ ಅದ್ದೂರಿಯಾಗಿ ಮದುವೆ ಮಾಡಲಾಯಿತು. ಗ್ರಾಮದ ಜನರೇ ಸೇರಿಕೊಂಡು ಒಂದು ಹೆಣ್ಣು, ಒಂದು ಗಂಡು ಕಪ್ಪೆ ಹಿಡಿದುಕೊಂಡು ಬಂದು, ಅದ್ದೂರಿಯಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ.
ವಿಶೇಷವೆಂದ್ರೆ ಕಪ್ಪೆಗಳ ಮದುವೆಯನ್ನು ಕೂಡಾ ಶಾಸ್ತ್ರೋಕ್ತವಾಗಿ ಮಾಡಿದ್ದು. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ಮದುವೆ ಸಮಯದಲ್ಲಿ ಯಾವೆಲ್ಲಾ ಪೂಜೆ ಪುನಸ್ಕಾರ ಮಾಡುತ್ತಾರೋ, ಶಾಸ್ತ್ರೋಕ್ತವಾಗಿ ಹೇಗೆ ಮದುವೆ ಮಾಡ್ತಾರೋ, ಅದೇ ರೀತಿ ಗ್ರಾಮದ ಜನರು ಕಪ್ಪೆಗಳ ಮದುವೆ ಮಾಡಿದ್ದಾರೆ.
ಇನ್ನು ಕಪ್ಪೆಗಳು ಅಂದಮೇಲೆ ಕೇಳಬೇಕೆ, ಅವು ನಿಂತಲ್ಲಿ ನಿಲ್ಲೋದಿಲ್ಲಾ. ಕೂತಲ್ಲಿ ಕೂರೋದಿಲ್ಲಾ. ಅದಕ್ಕಾಗಿಯೇ ಕಪ್ಪೆಯಂತೆ ಯಾಕೆ ಜಿಗಿತೀಯಾ ಅನ್ನೋ ಮಾತು ಪ್ರಚಲಿತವಿದೆ. ಆದರೆ ಗ್ರಾಮದ ಜನರಿಗೆ ಕಪ್ಪೆಗಳಿಗೆ ಮದುವೆ ಮಾಡೋ ಸಂಭ್ರಮ.
ಆದರೆ ಕಪ್ಪೆಗಳಿಗೆ ಮಾತ್ರ ಯಮಹಿಂಸೆ. ಹೀಗಾಗಿ ಮದುವೆ ಸಮಯದಲ್ಲಿ ಕಪ್ಪೆಗಳು ಎಸ್ಕೇಪ್ ಆಗಲು ಮುಂದಾಗಿದ್ದವು. ಆದರೆ ಗ್ರಾಮದ ಜನರು ಕಾಲು ಕಟ್ಟಿ ಮದುವೆ ಮಾಡಿಸಿದ್ದಾರೆ. ಗಂಡು ಕಪ್ಪೆಯಿಂದ ಹೆಣ್ಣು ಕಪ್ಪೆಗೆ ತಾಳಿ ಕಟ್ಟಿಸಿ, ಅಕ್ಷತೆ ಹಾಕಿ, ಊಟ ಮಾಡಿ ಮದುವೆ ಶಾಸ್ತ್ರ ಮಾಡಿದ್ದಾರೆ.
ಯಾಕಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿದ ಜನರು? ಕಪ್ಪೆಗಳಿಗೆ ಗ್ರಾಮದ ಜನರು ಅದ್ದೂರಿಯಾಗಿ ಮದುವೆ ಮಾಡಲು ಕಾರಣ, ವರುಣ ದೇವನ ಮುನಿಸು. ಹೌದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾದರು ಕೂಡಾ ಕಲಬುರಗಿ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ.
ಕಲಬುರಗಿ ತಾಲೂಕಿನ ಜಂಬಗಾ ಸೇರಿದಂತೆ ಅನೇಕ ಭಾಗದಲ್ಲಿ ಮಳೆಯಾಗಿಲ್ಲ. ಹೀಗಾಗಿ ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿದೆ. ಹೀಗಾಗಿ ಜಂಬಗಾ ಸೇರಿದಂತೆ ಅನೇಕ ಕಡೆ ಕಪ್ಪೆಗಳಿಗೆ ಮದುವೆ ಮಾಡೋದು, ಕತ್ತೆಗಳಿಗೆ ಮದುವೆ ಮಾಡೋದು ಮಾಡುತ್ತಿದ್ದಾರೆ. ಹತ್ತಾರು ರೀತಿಯ ಹರಕೆಗಳನ್ನು ತೀರಿಸುತ್ತಿದ್ದಾರೆ. ಕಪ್ಪೆಗಳಿಗೆ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದೇವೆ. ಮಳೆಯಾದ್ರೆ ರೈತರ ಬದುಕು ನೆಮ್ಮದಿಯಾಗುತ್ತದೆ. ಇಲ್ಲದಿದ್ದರೆ ಸಂಕಷ್ಟ ತಪ್ಪಿದಲ್ಲಾ ಅಂತಿದ್ದಾರೆ ಜಂಬಗಾ ಗ್ರಾಮದ ಲಕ್ಷ್ಮಿಕಾಂತ್.