Kannada News Photo gallery From India's Ashtadhyayi to USA's Tyranny of Mirrors, G20 Digital Museum Showcases Cultural Specialities
G20: ಭಾರತದ ಅಷ್ಟಾಧ್ಯಾಯಿಯಿಂದ ಕೊರಿಯಾದ ಟೊಪ್ಪಿಯವರೆಗೆ; ಭಾರತ್ ಮಂಟಪಂನಲ್ಲಿ ಜಿ20 ದೇಶಗಳ ಸಾಂಸ್ಕೃತಿಕ ವೈಭವ
ಭಾರತದ ಅಧ್ಯಕ್ಷತೆಯಲ್ಲಿ ನಡೆದ 2023ರ ಜಿ20 ಶೃಂಗಸಭೆ (G20 Summit) ಅಮೋಘ ಯಶಸ್ಸು ಕಂಡಿದೆ. ಈ ಸಭೆಯಲ್ಲಿ ಬಹಳಷ್ಟು ಅಂಶಗಳು ಗಮನ ಸೆಳೆದಿವೆ. ಜಾಗತಿಕ ನಾಯಕನಾಗಿ ಭಾರತವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಇದೇ ವೇಳೆ, ಎರಡು ದಿನಗಳ ಕಾಲ ಶೃಂಗಸಭೆ ನಡೆದ ಸ್ಥಳ ಭಾರತ್ ಮಂಡಪಂ ಕೂಡ ಅತಿಥಿಗಳ ಗಮನ ಸೆಳೆದಿದೆ. ‘ಕಲ್ಚರ್ ಕಾರಿಡಾರ್; ಜಿ20 ಡಿಜಿಟಲ್ ಮ್ಯೂಸಿಯಮ್’ ಎಂದು ವಿಶೇಷ ಯೋಜನೆಯನ್ನು ಭಾರತ್ ಮಂಡಪಂನಲ್ಲಿ ಅನಾವರಣಗೊಳಿಸಲಾಗಿತ್ತು. ನ್ಯೂಡೆಲ್ಲಿ ಜಿ20 ಸಭೆಯ ಥೀಮ್ ಆದ ‘ವಸುದೈವ ಕುಟುಂಬಕಂ’ ತತ್ವದ ಆಧಾರದಲ್ಲಿ ಸಾಂಸ್ಕೃತಿಕ ಕಾರಿಡಾರ್ ಅನ್ನು ಭಾರತ್ ಮಂಡಪಂನಲ್ಲಿ ಪ್ರತಿಬಿಂಬಿಸಲಾಗಿತ್ತು.
ಜಿ20 ಸದಸ್ಯ ದೇಶಗಳು ಹಾಗೂ 9 ಆಹ್ವಾನಿತ ದೇಶಗಳ ಸಾಂಸ್ಕೃತಿಕ ವಿಶೇಷತೆಗಳು ಭಾರತ್ ಮಂಟಪಂನಲ್ಲಿ ಮೇಳೈಸಿದ್ದವು. ಇದರಲ್ಲಿ ಭಾರತದ ಅಷ್ಟಾಧ್ಯಾಯಿ, ಅರ್ಜೆಂಟೀನಾದ ಪೋಂಚೋ, ಜಪಾನೀ ಗಾಯಕಿ ನೆಂಡೋರಾಯ್ಡ್ ಹಟ್ಸುನೆ ಮಿಕು ಹೀಗೆ ಹಲವು ಐತಿಹಾಸಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು, ವಸ್ತುಗಳು ನೋಡುಗರನ್ನು ಸೆಳೆಯುತ್ತಿದ್ದವು. ಭಾರತ್ ಮಂಟಪಂನಲ್ಲಿ ಡಿಜಿಟಲ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದ್ದ 20 ಜಿ20 ದೇಶಗಳ ಸಾಂಸ್ಕೃತಿಕ ಪ್ರತೀಕ ವಸ್ತುಗಳ ವಿವರ ಇಲ್ಲಿದೆ...
1 / 20
ಜಿ20 ಡಿಜಿಟಲ್ ಮ್ಯೂಸಿಯಂ: ಅರ್ಜೆಂಟೀನಾದ ಪೋಂಚೋ - ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಬುಡಕಟ್ಟು ಜನರು ತಯಾರಿಸುತ್ತಿದ್ದ ವಿಶೇಷ ಉಣ್ಣೆ ರೀತಿಯ ಬಟ್ಟೆ ಇದಾಗಿದೆ. ಸಾವಿರ ವರ್ಷಗಳ ಹಿಂದೆ ಸ್ಯಾನ್ ಜುವಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಪೋಂಚೋ ಪತ್ತೆಯಾಗಿತ್ತು. ಕ್ಯಾರೋಬ್ ಮರ, ವಾಲ್ನಟ್ ಚಿಪ್ಪು ಮತ್ತು ಉಣ್ಣೆ ಇತ್ಯಾದಿ ಬಳಸಿ ಪೋಂಚೋ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು. ಇದು ಮಳೆಯಿಂದಲೂ ಜನರಿಗೆ ರಕ್ಷಣೆ ನೀಡುವಂಥದ್ದು.
2 / 20
ಜಿ20 ಡಿಜಿಟಲ್ ಮ್ಯೂಸಿಯಂ: ಆಸ್ಟ್ರೇಲಿಯಾದ ಯಿಣಪುಣಪು (YIŊAPUŊAPU ) ಕಲೆ- 1963ರಲ್ಲಿ ಖ್ಯಾತ ಕಲಾವಿದ ನಾರಿಟ್ಜಿನ್ ಮಾಯ್ಮುರು (Narritjin Maymuru) ಎಂಬವವರು ರಚಿಸಿದ ಪೈಂಟಿಂಗ್ ಇದು. ಆಸ್ಟ್ರೇಲಿಯಾದ ಮೂಲ ನಿವಾಸಿಗಳಾದ ಯೋಲ್ಣು (Yolŋu) ಎಂಬ ಜನಾಂಗದ ಸಾಂಸ್ಕೃತಿಕ ಸಮೃದ್ಧತೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
3 / 20
ಜಿ20 ಡಿಜಿಟಲ್ ಮ್ಯೂಸಿಯಂ: ಬ್ರೆಜಿಲ್ನ ಸಂಸದೀಯ ಭವನ - ಬ್ರೆಜಿಲ್ ದೇಶದ ಪ್ರಜಾತಂತ್ರ ಉತ್ಸಾಹಕ್ಕೆ ಪ್ರತೀಕವಾಗಿ ಅಲ್ಲಿನ ರಾಷ್ಟ್ರೀಯ ಸಂಸತ್ತು ಅರಮನೆ ಇದೆ. ಬಹಳ ಅದ್ಬುತ ವಾಸ್ತುಶಿಲ್ಪ ತಂತ್ರಜ್ಞಾನವನ್ನು ಇದರಲ್ಲಿ ಕಾಣಬಹುದು. ಇದರ ಮಾಡೆಲ್ ಅನ್ನು ಭಾರತ್ ಮಂಡಪಂನಲ್ಲಿ ಪ್ರದರ್ಶಿಸಲಾಗಿದೆ.
4 / 20
ಜಿ20 ಡಿಜಿಟಲ್ ಮ್ಯೂಸಿಯಂ: ಕೆನಡಾದ ಸಮುದ್ರ ರಕ್ಕಸನ ಮುಖವಾಡ- ಕೆನಡಾ ಕಲಾವಿದ ಕ್ಯಾಲ್ವಿನ್ ಹಂಟ್ ಎಂಬುವರು ರೂಪಿಸಿದ ಸೀ ಮಾನ್ಸ್ಟರ್ ಟ್ರಾನ್ಸ್ಫಾರ್ಮೇಶನ್ ಮಾಸ್ಕ್ ಬಹಳ ವಿಶೇಷ ಎನಿಸುತ್ತದೆ. ಇದು ಜನಪ್ರಿಯ ದಂತಕಥೆಯೊಂದರ ಥೀಮ್ ಮೇಲೆ ಮಾಡಲಾದ ಮುಖವಾಡ. ಸಮುದ್ರದೊಳಗಿನ ರಾಕ್ಷಸನೊಬ್ಬ ಕ್ವಾಕ್ವಾಕವಾಕವ (Kwakwaka’wakw) ಎಂಬ ಗ್ರಾಮವನ್ನು ಕಾಪಾಡುತ್ತಿದ್ದನೆಂಬ ದಂತ ಕಥೆ ಅದು.
5 / 20
ಜಿ20 ಡಿಜಿಟಲ್ ಮ್ಯೂಸಿಯಂ: ಚೀನಾದ ಲೋಟಸ್ ಪಾಂಡ್ ವಿನ್ಯಾಸ- ಚೀನಾದ ಸಿರಾಮಿಕ್ಸ್ ಕಸೂತಿ ಕಲೆ ವಿಶ್ವಖ್ಯಾತ ಎನಿಸಿದೆ. ಅದರಲ್ಲಿ ಫಹುವಾ ಎಂಬುದು ಒಂದು. ಮಧ್ಯಪ್ರಾಚ್ಯ ಕಾಲದಲ್ಲಿ ಚೀನಾದ ಯುವಾನ್ ವಂಶದ ಆಡಳಿತದ ವೇಳೆ ಫಹುವಾ ಕಲೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ಬೌದ್ಧ ಧರ್ಮದ ಮೂಲಕ ಈ ಕಲೆ ಭಾರತದಿಂದ ಚೀನಾಗೆ ಹೋಯತು ಎಂದೂ ಹೇಳಲಾಗುತ್ತದೆ.
6 / 20
ಜಿ20 ಡಿಜಿಟಲ್ ಮ್ಯೂಸಿಯಂ: ಐರೋಪ್ಯ ಒಕ್ಕೂಟದ ಮೇರೀ ಕ್ಯೂರಿ ಪ್ರತಿಮೆ- ಖ್ಯಾತ ವಿಜ್ಞಾನಿ ಮೇಡಂ ಮೇರಿ ಕ್ಯೂರಿ ಅವರಿಗೆ ಗೌರವಾರ್ಥವಾಗಿ ಜರ್ಮನಿ ಕಲಾವಿದೆ ಆನಾ ಫ್ರಾಂಜಿಕಾ ಶ್ವಾರ್ಜ್ಬ್ಯಾಕ್ ಅವರು ಅದ್ಭುತ ಕಂಚಿನ ಪ್ರತಿಮೆ ಕಡೆದಿದ್ದರು. ಮೇರಿ ಕ್ಯೂರಿ ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಯಾಗಿದ್ದಾರೆ. ಈಕೆ ಅನೇಕ ಮಹಿಳೆಯರಿಗೆ ವಿಜ್ಞಾನ ಓದಲು ಪ್ರೇರೇರಿಸಿದ ವ್ಯಕ್ತಿ. ಹೀಗಾಗಿ, ಈಕೆಯ ಪ್ರತಿಮೆಯನ್ನು ಅಮೂಲ್ಯವಾಗಿ ಪರಿಗಣಿಸಿ ಸಂಗ್ರಹಿಸಿಡಲಾಗಿದೆ.
7 / 20
ಜಿ20 ಡಿಜಿಟಲ್ ಮ್ಯೂಸಿಯಂ: ಫ್ರಾನ್ಸ್ನ ಪೋರ್ಸಿಲೀನ್ ಹೂಕುಂಡ- ಪೂರ್ವ ಏಷ್ಯಾದ ಪೋರ್ಸಿಲೀನ್ ವಸ್ತುವಿನಿಂದ ಫ್ರಾನ್ಸ್ನ ಮ್ಯಾನುಫ್ಯಾಕ್ಚರ್ ಡೀ ಸೆವ್ರೆಸ್ ಎಂಬ ಸಂಸ್ಥೆ 1912ರಲ್ಲಿ ಆಕ್ಸೆರೆ ವಾಸ್ (ಹೂಕುಂಡ) ಅನ್ನು ತಯಾರಿಸಿತ್ತು. ಇದರ ಕಸೂತಿ ಕಲೆ ವಿಶೇಷ ಎನಿಸಿದೆ. ಹಲವು ದಶಕಗಳಿಂದ ಈ ಹೂಕುಂಡವನ್ನು ಫ್ರಾನ್ಸ್ನ ಕಲಾ ಮತ್ತು ಸಾಂಸ್ಕೃತಿ ಶ್ರೀಮಂತಿಕೆಯೊಂದಿಗೆ ತಾಳೆ ಮಾಡುತ್ತಾ ಬರಲಾಗಿದೆ.
8 / 20
ಜಿ20 ಡಿಜಿಟಲ್ ಮ್ಯೂಸಿಯಂ: ಜರ್ಮನಿಯ ಬೀಟಲ್ ಮಿನಿಯೇಚರ್ ಮಾಡಲ್- ವೋಲ್ಸ್ ವ್ಯಾಗನ್ ಕಂಪನಿಯ ಹಳೆಯ ಬೀಟಲ್ ಕಾರಿನ ಕಿರು ನಕಲು ಅಥವಾ ಮಿನಿಯೇಚರ್ ರೆಪ್ಲಿಕಾ ತಯಾರಿಸಲಾಗಿದೆ. ಜರ್ಮನಿಯ ಎಂಜಿನಿಯರಿಂಗ್ ಸಾಧನೆಯ ಪ್ರತೀಕವೆಂದು ಪರಿಗಣಿಸಲಾಗಿದೆ. ಕಾರು ಪ್ರಪಂಚದ ಮೇರು ಹೆಸರುಗಳಾದ ಬಿಎಂಡಬ್ಲ್ಯೂ, ವೋಲ್ಸ್ವ್ಯಾಗನ್ ಕಂಪನಿಗಳು ಜರ್ಮನಿಯವವೇ. ವಿಡಬ್ಲ್ಯು ಬೀಟಲ್ ಕಾರು 20ನೇ ಶತಮಾನದ ಮಧ್ಯಭಾಗದಿಂದ ಶುರುವಾಗಿ ಹಲವು ದಶಕಗಳ ಕಾಲ ರಸ್ತೆಯ ಸಾಮ್ರಾಟನಂತಿತ್ತು. ಇದರ ರೆಪ್ಲಿಕಾ ಮಾಡೆಲ್ಗಳನ್ನು ಜಿ20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪಂನಲ್ಲಿ ಇಡಲಾಗಿದ್ದು ವಿಶೇಷ.
9 / 20
ಜಿ20 ಡಿಜಿಟಲ್ ಮ್ಯೂಸಿಯಂ: ಭಾರತದ ಅಷ್ಟಾಧ್ಯಾಯಿ- ಕ್ರಿಸ್ತಪೂರ್ವ 6ರಿಂದ 5ನೇ ಶತಮಾನದ ಹಿಂದೆ ಬದುಕಿದ್ದ ಪಾಣಿನಿ ಅವರು ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣ ಗ್ರಂಥ ರಚಿಸಿದ್ದರು. ಇದರಲ್ಲಿ ಎಂಟು ಅಧ್ಯಾಯಗಳಿದ್ದು 4,000 ಸೂತ್ರಗಳನ್ನು ಪಾಣಿನಿ ಪ್ರಸ್ತುಪಡಿಸಿದ್ದಾರೆ. ಸಂಸ್ಕೃತದ ವ್ಯಾಕರಣ ಬಹಳ ವೈಜ್ಞಾನಿಕ ಎಂದು ಪರಿಗಣಿತವಾಗಿದೆ.
10 / 20
ಜಿ20 ಡಿಜಿಟಲ್ ಮ್ಯೂಸಿಯಂ: ಇಂಡೋನೇಷ್ಯಾದ ಬಾಟಿಕ್ ಸಾರಂಗ್ ಬಟ್ಟೆ- ಜಾವಾ ದ್ವೀಪಗಳ ರಾಷ್ಟ್ರವಾದ ಇಂಡೋನೇಷ್ಯಾ ಸಾಂಸ್ಕೃತಿಕವಾಗಿ ಬಹಳ ಸಮೃದ್ಧವಾಗಿದೆ. ಅಲ್ಲಿನ ಬಾಟಿಕ್ ಶೈಲಿಯ ಬಟ್ಟೆಗಳ ಒಂದು ದೊಡ್ಡ ಪರಂಪರೆಯೇ ಇದೆ. ಮೇಣ ಬಳಸಿ ಇಲ್ಲಿನ ಬಟ್ಟೆಗಳಿಗೆ ಸೂಕ್ಷ್ಮ ಕಸೂತಿಯ ಸ್ಪರ್ಶ ನೀಡಲಾಗುತ್ತದೆ. 2009ರಲ್ಲಿ ಯುನೆಸ್ಕೋದಿಂದ ಈ ಬಾಟಿಕ್ ಶೈಲಿಗೆ ಪಾರಂಪರಿಕ ಸ್ಥಾನದ ಮಾನ್ಯತೆ ಸಿಕ್ಕಿದೆ.
11 / 20
ಜಿ20 ಡಿಜಿಟಲ್ ಮ್ಯೂಸಿಯಂ: ಇಟಲಿಯ ಬೆಲ್ವೆಡೆರೆ ಅಪೋಲೋ - ಇದು ರೋಮನ್ ಕಾಲದ ದೇವರಾದ ಅಪೋಲೋ ಬೆಲ್ವೆಡೆರೆಯ ಕಂಚಿನ ಪ್ರತಿಮೆ. ಇಟಲಿ ಕ್ರಾಂತಿ ನಡೆಯುವ ವೇಳೆ ಇದ್ದ ಜಕೋಪೋ ಬೋನಾಕೊಲ್ಸಿ ಅವರು ಈ ಪ್ರತಿಮೆ ಕಡೆದ ಶಿಲ್ಪಿ. 15ನೇ ಶತಮಾನದಲ್ಲಿ ಸಿಕ್ಕ ಅಪೋಲೋ ದೇವರ ಪ್ರತಿಮೆಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಜಕೋಪೋ ಅವರು ಈ ಪ್ರತಿಮೆ ತಯಾರಿಸಿದ್ದರು.
12 / 20
ಜಿ20 ಡಿಜಿಟಲ್ ಮ್ಯೂಸಿಯಂ: ಜಪಾನ್ನ ಹಟ್ಸುನೆ ಮಿಕು- ನೆಂಡೊರಾಯ್ಡ್ ಹಟ್ಸುನೆ ಮಿಕು ಎಂಬುದು ಮನುಷ್ಯ ಆಕೃತಿಯಲ್ಲಿರುವ ರಚನೆ. ಮೂರು ಶತಮಾನಗಳಷ್ಟು ಪುರಾತನವಾದ ಮತ್ತು ಜಪಾನ್ ಸಂಸ್ಕೃತಿಯ ಪ್ರತೀಕವಾದ ಕೋರಿನ್ ಕಿಮೋನೋ ಉಡುಗೆಯನ್ನು ಈ ಆಕೃತಿಗೆ ಅಳವಡಿಸಲಾಗಿದೆ. ತಂತ್ರಾಂಶದ ಸಹಾಯದಿಂದ ಇದು ಹಾಡಬಲ್ಲುದು. ಸಾಕಷ್ಟು ಜನಪ್ರಿಯವೂ ಆಗಿದೆ.
13 / 20
ಜಿ20 ಡಿಜಿಟಲ್ ಮ್ಯೂಸಿಯಂ: ಕೊರಿಯಾದ ಟೊಪ್ಪಿ- ಸೌತ್ ಕೊರಿಯಾ ಅಥವಾ ರಿಪಬ್ಲಿಕ್ ಆಫ್ ಕೊರಿಯಾ ದೇಶವನ್ನು ಟೊಪ್ಪಿಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿ ಟೊಪ್ಪಿಗಳಿಗೆ ಶತಶತಮಾನದ ಇತಿಹಾಸವೇ ಇದೆ. ಗ್ಯಾಟ್ ಮತ್ತು ಜೊಕ್ದುರಿಯನ್ನು ಭಾರತ್ ಮಂಡಪಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಗ್ಯಾಟ್ ಎಂಬುದು ಕೊರಿಯಾದ ಪ್ರಸಿದ್ದ ಜೋಸಿಯೋನ್ ಎಂಬ ರಾಜಮನೆತನದವರು ತೊಡುತ್ತಿದ್ದ ಕಪ್ಪು ಬಣ್ಣದ ಟೊಪ್ಪಿ. ಇನ್ನು, ಜೋಕ್ದುರಿ ಎಂಬುದು ಮಹಿಳೆಯರಿಗೆಂದು ಇದ್ದ ಟೊಪ್ಪಿ.
14 / 20
ಜಿ20 ಡಿಜಿಟಲ್ ಮ್ಯೂಸಿಯಂ: ಮೆಕ್ಸಿಕೋದ ನಾಗದೇವ, ಭೂದೇವತೆ - ಮೆಕ್ಸಿಕೋ ಮೂಲನಿವಾಸಿಗಳೆನ್ನಲಾದ ಅಜ್ಟೆಕ್ ಜನಾಂಗದವರ ಪುರಾಣಕಥೆಗಳಲ್ಲಿ ಬರುವ ಎರಡು ದೇವರುಗಳು ಕ್ವೆಟ್ಝಲ್ಕೋಟಲ್ (Quetzalcoatl) ಮತ್ತು ಟ್ಲಾಟೆಕುಟ್ಲಿ (Tlaltecuhtli). ಇದರಲ್ಲಿ ಮೊದಲನೆಯದು ಸರ್ಪಗಳ ದೇವರು. ಇನ್ನು, ಟ್ಲಾಟೆಕುಟ್ಲಿ ಎಂಬುದು ಭೂ ದೇವತೆ. ಇವೆರಡು ಪುರಾಣಕಥೆ ದೇವರುಗಳ ಶಿಲ್ಪವನ್ನು ನವದೆಹಲಿಯ ಜಿ20 ಸಭಾಂಗಣದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
15 / 20
ಜಿ20 ಡಿಜಿಟಲ್ ಮ್ಯೂಸಿಯಂ: ರಷ್ಯಾದ ನಾರಿ ತೊಡುಗೆ - ರಷ್ಯಾ ಮಹಿಳೆಯ ಸಾಂಸ್ಕೃತಿಕ ಉಡುಗೆಯಾದ ಖಾಕಸ್ ಅನ್ನು ಭಾರತ್ ಮಂಟಪಂನಲ್ಲಿ ಇಡಲಾಗಿತ್ತು. ಕಂಚಿನ ಯುಗದಲ್ಲಿದ್ದ ಖಾಕಸ್ ಸಂಸ್ಕೃತಿಯ ಪ್ರತೀಕವಾಗಿ ಈ ಉಡುಗೆ ಇದೆ. ಸಂತಾನ ದೇವತೆ ಎನಿಸಿದ್ದ ಯಮಾಯ್ಗೆ ಭಕ್ತಿ ಪೂರ್ವಕವಾಗಿ ಆಗಿನ ಕಾಲದಲ್ಲಿ ಇಂಥ ಶೈಲಿಯ ಉಡುಗೆಗಳನ್ನು ತಯಾರಿಸಲಾಗುತ್ತಿತ್ತು.
16 / 20
ಜಿ20 ಡಿಜಿಟಲ್ ಮ್ಯೂಸಿಯಂ: ಸೌದಿ ಅರೇಬಿಯಾದ ಅರಮಾಯಿಕ್ ಶಾಸನ- ಇದು ಸೌದಿ ಅರೇಬಿಯಾದ ಪ್ರಾಚೀನ ಯುಗದ ಕುರುಹಾಗಿದೆ. ಕ್ರಿಸ್ತಪೂರ್ವ ಆರನೇ ಶತಮಾನದ ಹಿಂದಿನದ್ದೆನ್ನಲಾದ ಅರಮಾಯಿಕ್ ಶಾಸನವನ್ನು ಜಿ20 ಭಾರತ್ ಮಂಟಪಂನ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದರಲ್ಲಿ ಸಾಲ್ಮ್ ದೇವರ ಮಂದಿರಕ್ಕೆ ಪೂಜಾರಿಯ ನೇಮಕದ ಬಗ್ಗೆ ಬರೆಯಲಾಗಿದೆ. ಈ ಶಾಸನವು ಸೌದಿ ಅರೇಬಿಯಾದ ತಬುಕ್ ಸಮೀಪದ ತಾಯ್ಮ ಎಂಬ ಪ್ರದೇಶದಲ್ಲಿ ದೊರೆತಿತ್ತು. ಇಲ್ಲಿ ಇದೊಂದೇ ಅಲ್ಲ, ಪ್ರಾಚೀನ ಯುಗದ ಹಲವು ವಸ್ತುಗಳು ಉತ್ಖನನದ ವೇಳೆ ಸಿಕ್ಕಿವೆ.
17 / 20
ಜಿ20 ಡಿಜಿಟಲ್ ಮ್ಯೂಸಿಯಂ: ದಕ್ಷಿಣ ಆಫ್ರಿಕಾದ ಪ್ರಾಚೀನ ತಲೆಬುರುಡೆ- ಆಸ್ಟ್ರೇಲೋಪಿಥೆಕಸ್ ಆಫ್ರಿಕಾನಸ್ ಎಂದು ಕರೆಯಲಾಗುವ ಪ್ರಾಚೀನ ತಲೆಬುರುಡೆಯೊದು 1947ರಲ್ಲಿ ಸಿಕ್ಕಿತ್ತು. ಇದು ಅಂತಿಂಥ ತಲೆಬುರುಡೆಯಲ್ಲ. 25 ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಮಹಿಳೆಯೊಬ್ಬಳದ್ದು. ಇದಕ್ಕೆ ಮಿಸಸ್ ಪ್ಲೆಸ್ ಎಂದೂ ಹೆಸರಿಸಲಾಗಿದೆ. ಇವತ್ತಿನ ಮನುಷ್ಯ ಜನಾಂಗದ ಪೂರ್ವಿಕರ ಗುಂಪಿಗೆ ಸೇರಿದ್ದು. ಮನುಷ್ಯ ಸಂತತಿಯ ಉಗಮ ಎಂದು ಆಫ್ರಿಕಾವನ್ನು ಪರಿಗಣಿಸಲಾಗಿದೆ.
18 / 20
ಜಿ20 ಡಿಜಿಟಲ್ ಮ್ಯೂಸಿಯಂ: ಟರ್ಕಿಯೆ ದೇಶದ ಗೋಬೆಕ್ಲಿ ಪಿಲ್ಲರ್- ಟರ್ಕಿಯಲ್ಲಿ ಕೆಲವಾರು ಪ್ರಾಚೀನ ನಾಗರಿಕತೆಗಳು ಹುಟ್ಟಿವೆ. ಅದರಲ್ಲಿ ಮೆಸೊಪೊಟೇಮಿಯಾ ಒಂದು. ಆ ಕಾಲದ ವಾಸ್ತುಶಿಲ್ಪ ವಿಶೇಷವಾಗಿದೆ. ದೊಡ್ಡ ಕಟ್ಟಡಗಳನ್ನು ಇಂಗ್ಲೀಷ್ನ T ಆಕಾರದ ಲೈಮ್ಸ್ಟೋನ್ ಸ್ತಂಭದ ಮೇಲೆ ನಿರ್ಮಿಸಲಾಗುತ್ತಿತ್ತು. ಇಂಥ ಸ್ತಂಭಗಳ ಗಾಜಿನ ರೆಪ್ಲಿಕಾ ಸೃಷ್ಟಿಸಲಾಗಿದೆ. ಇದು ಮೆಸಪೊಟೋಮಿಯಾ ಸಂಸ್ಕೃತಿಯ ಪ್ರತೀಕ ಎನಿಸಿದೆ.
19 / 20
ಜಿ20 ಡಿಜಿಟಲ್ ಮ್ಯೂಸಿಯಂ: ಬ್ರಿಟನ್ ದೇಶದ ಮ್ಯಾಗ್ನ ಕಾರ್ಟಾ- ಮ್ಯಾಗ್ನ ಕಾರ್ಟ (Magna Carta) ಎಂಬುದು ಬ್ರಿಟನ್ ದೇಶದ ಇತಿಹಾಸದ ಹೆಮ್ಮೆಯ ಗ್ರಂಥ. 13ನೇ ಶತಮಾನದಲ್ಲಿ ಇದನ್ನು ರಚಿಸಲಾಗಿದೆ. ಒಬ್ಬ ರಾಜ ಮತ್ತು ಪ್ರಜೆಗಳ ಮಧ್ಯೆ ಸಂಬಂಧ ಹೇಗಿರಬೇಕು ಎಂಬುದನ್ನು ತಿಳಿಸುವ ಈ ಗ್ರಂಥದಲ್ಲಿ 1,225 ಸಾಲುಗಳಿವೆ. ಈ ಮೂಲ ಗ್ರಂಥದ ನಕಲನ್ನು ಸೃಷ್ಟಿಸಿ ಭಾರತ್ ಮಂಟಪಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು.
20 / 20
ಜಿ20 ಡಿಜಿಟಲ್ ಮ್ಯೂಸಿಯಂ: ಅಮೆರಿಕದ ಟಿರಾನಿ ಆಫ್ ಮಿರರ್ಸ್- ಅಮೆರಿಕದ ಮೇರು ಕಲಾವಿದ ಸ್ಯಾನ್ಫಾರ್ಡ್ ಬಿಗ್ಗರ್ಸ್ ಅವರ ಕೋಡೆಕ್ಸ್ ಸರಣಿಯಲ್ಲಿ ಮೂಡಿ ಬಂದ ಪೇಂಟಿಂಗ್ ಕೃತಿ ಟಿರಾನಿ ಆಫ್ ಮಿರರ್ಸ್ ಒಂದು. ವಿವಿಧ ಸಾಂಸ್ಕೃತಿಕ ಎಳೆಗಳನ್ನು ಇವತ್ತಿನ ಕಲೆಯೊಂದಿಗೆ ಮೇಳೈಸಿದಂತಹ ಪ್ರತಿಭೆ ಸ್ಯಾನ್ಫೊರ್ಡ್ ಬಿಗ್ಗರ್ಸ್. 3ಡಿ ಕ್ಯೂಬ್ಗಳಿಂದ ಈ ಕೃತಿ ತಯಾರಿಸಿದ್ದಾರೆ. ಇದರಲ್ಲಿ ಈ ಕ್ಯೂಬ್ಗಳು ಚಲಿಸುತ್ತಿರುವಂತೆ ಕಾಣುತ್ತದೆ.